ಜಿಲ್ಲೆಯಲ್ಲಿ ತೆಂಗು ಪಾರ್ಕ್ ಸ್ಥಾಪನೆ
ಕ.ಪ್ರ.ವಾರ್ತೆ ಚಾ.ನಗರ ಜು.14
ತೆಂಗು ಉತ್ಪನ್ನ ಮೌಲ್ಯವರ್ಧನಗೆ ಸರ್ಕಾರ ರಾಜ್ಯದಲ್ಲಿ ಐದು ತೆಂಗು ಪಾರ್ಕ್ ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ಐದರ ಪೈಕಿ ಚಾಮರಾಜನಗರ ಜಿಲ್ಲೆಯಲ್ಲೂ ಒಂದು ತೆಂಗು ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವರ್ತಕರ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಥಗಿತ ನೀರಾ ಉತ್ಪಾದನೆಗೆ ಬಜೆಟ್‌ನಲ್ಲಿ ಮರುಜೀವ ನೀಡಲಾಗಿದ್ದು, ತೆಂಗು ಅಭಿವೃದ್ಧಿಗೆ ಹೆಚ್ಚಿನ ನೀಡಲಾಗಿದೆ. ಐದು ತೆಂಗು ಪಾರ್ಕ್‌ಗಳ ಪೈಕಿ ಚಾಮರಾಜನಗರದಲ್ಲೂ ಒಂದು ಪಾರ್ಕ್ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸ್ಥಗಿತವಾಗಿದ್ದ ನೀರಾ ಉತ್ಪಾದನೆಗೆ ಬಜೆಟ್‌ನಲ್ಲಿ ಅನುಮತಿ ನೀಡಲಾಗಿದ್ದು, ತೆಂಗಿನ ಮರಗಳಿಂದ ನೀರಾ ಉತ್ಪಾದಿಸಲು ಇರುವ ಆಡಚಣೆ ನಿವಾರಿಸಲು ಕೆಲವು ತಿದ್ದುಪಡಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ತೆಂಗು ಅಭಿವೃದ್ಧಿಗೂ ಹೆಚ್ಚಿನ ಆನುದಾನ ನೀಡಲಾಗಿದ್ದು, ತೆಂಗು ಪಾರ್ಕ್ ಸ್ಥಾಪನೆ ಮಾಡುವುದರಿಂದ ಎಳನೀರು ಮತ್ತು ಘಟಕ ಸ್ಥಾಪನೆ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಕೃಷಿ ವಿವಿ ಕಾಲೇಜುಗಳನ್ನು ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದ್ದು, ಇದನ್ನು ಬಜೆಟ್‌ನಲ್ಲಿ ಸೇರಿಸಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ವಿವಿ ಕಾಲೇಜನ್ನು ಸ್ಥಾಪನೆ ಮಾಡಲಾಗುವುದು. ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ರೈತ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಸ್ಮರಣಾರ್ಥ ನಿರ್ಮಾಣ ಮಾಡಲಾಗಿರುವ ಅಮೃತಭೂಮಿಯಲ್ಲಿ ಸಾವಯವ ಕೃಷಿ ಚಟುವಟಿಕೆ ಕೈಗೊಳ್ಳಲು 5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ನಮ್ಮ ಸರ್ಕಾರ ಪ್ರಚಾರಕ್ಕಾಗಿ ಯಾವುದೇ ಯೋಜನೆ ರೂಪಿಸಿಲ್ಲ. ಶಾಶ್ವತ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ನೀರಾವರಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಿಗೆ ಹೆಚ್ಚಿನ ಹಣ ಮೀಸಲಿಟ್ಟಿದೆ. ಹಿಂದಿನ ಬಜೆಟ್‌ನಲ್ಲಿ ಕೆಲವು ಮಾರ್ಪಾಡು ಮಾಡಲಾಗಿದ್ದು, ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದ 7 ಮೆಡಿಕಲ್ ಕಾಲೇಜುಗಳ ಪೈಕಿ 4ನ್ನು ಮಾತ್ರ ಘೋಷಣೆ ಮಾಡಿದೆ. ಅದರಲ್ಲಿ ಚಾಮರಾಜನಗರ ಮೆಡಿಕಲ್ ಕಾಲೇಜು ಸಹ ಸೇರಿದೆ. ಈಗಾಗಲೇ ಚಾಮರಾಜನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ನಿಟ್ಟಿನಲ್ಲಿ 47 ಎಕರೆ ಜಾಗ ಗುರುತಿಸಲಾಗಿದ್ದು, ಈ ಸ್ಥಳ ಹಸ್ತಾಂತರವಾಗಬೇಕಿದೆ ಎಂದರು.
ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದು, ಹಾಲಿ ರಾಮಸಮುದ್ರದಲ್ಲಿ ಡೈರಿ ಇರುವ ಸ್ಥಳದಲ್ಲೇ 7 ಎಕರೆ ಪ್ರದೇಶವಿದ್ದು, ಅಲ್ಲೇ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲು ಚಾಲನೆ ನೀಡಲಾಗುವುದು. ಮರಿಯಾಲದಲ್ಲಿ ರಾಜಶೇಖರ ಮೂರ್ತಿ ಸ್ಮರಣಾರ್ಥ ಸ್ಥಾಪನೆ ಮಾಡಲಾಗಿರುವ ಅಖಿಲ ಭಾರತ ಮಾದರಿ ಶಾಲೆ ಸ್ಥಾಪನೆಗೆ 2 ಕೋಟಿ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಸ್ಥಾಪನೆಗೂ ಸರ್ಕಾರ ಬದ್ಧವಾಗಿದ್ದು ಜಿಲ್ಲೆಯಲ್ಲಿ ಮುಂದಿನ 5 ವರ್ಷಗಳಲ್ಲಿ ಅನೇಕ ಬದಲಾವಣೆ ಕಾಣಬಹುದಾಗಿದೆ. ಇದಕ್ಕೆ ಪೂರಕವಾಗಿ ಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸುವ ಬಗ್ಗೆ ಜಿಲ್ಲೆಯ ಪತ್ರಕರ್ತರು ಗಮನಹರಿಸಬೇಕು ಎಂದರು. ನಾನು ಸಹಕಾರ ಮಂತ್ರಿಯಾದ ಫಲವಾಗಿ ಮೊದಲ ಬಜೆಟ್‌ನಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲಾಗಿದೆ ಎಂದರು.
ಸಂಸದ ಧ್ರುವನಾರಾಯಣ, ಶಾಸಕ ಪುಟ್ಟರಂಗಶೆಟ್ಟಿ, ಎಸ್ಪಿ ರಾಜೇಂದ್ರಪ್ರಸಾದ್, ವರ್ತಕರ ಸಂಘದ ಅಧ್ಯಕ್ಷ ಜಯಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪತ್ರಕರ್ತರ ಸಂಘದ ನಿರ್ದೇಶಕ ಕೆ.ಎಸ್.ಬನಶಂಕರ ಆರಾಧ್ಯ ನಿರೂಪಿಸಿ, ನಗರ ಕಾರ್ಯದರ್ಶಿ ಎಸ್.ಎಂ. ನಂದೀಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆರ್.ಎನ್.ಸಿದ್ದಲಿಂಗಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಪತ್ರಿಕಾ ಮಂಡಳಿಯ ಸದಸ್ಯ ದೇವರಾಜು ಕಪ್ಪಸೋಗೆ ವಂದಿಸಿದರು.