ಮತ್ತಿನಲ್ಲಿ ಮಾರಮ್ಮನ ಬೆಳ್ಳಿ ವಿಗ್ರಹ ಕದ್ದ!
ಗುಂಡ್ಲುಪೇಟೆ: ತಾಲೂಕಿನ ಕುರುಬರ ಹುಂಡಿಯ ಮಾರಮ್ಮನ ಬೆಳ್ಳಿ ವಿಗ್ರಹವನ್ನು ಕುಡಿದ ಮತ್ತಿನಲ್ಲಿ ಮಾಜಿ ಗೌಡಿಕೆ ಪುಟ್ಟರಾಜು ಎತ್ತಿಕೊಂಡು ಹೋದ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಕುಡಿದ ಮತ್ತಿನಲ್ಲಿ ಮಾರಮ್ಮನ ಪ್ರಭಾವಳಿಯನ್ನು ಎತ್ತಿಕೊಂಡ ಹೋದ ನಂತರ ಅವರ ಪರಿಚಯದ ವ್ಯಕ್ತಿ ಹಾಲಹಳ್ಳಿ ಗ್ರಾಮದ ರಾಜಪ್ಪ ಎಂಬುವರ ಕೈಯಲ್ಲಿ ಪೊಲೀಸ್ ಠಾಣೆಗೆ ಕದ್ದೊಯ್ದ ವಿಗ್ರಹವನ್ನು ತಂದೊಪ್ಪಿಸಿದ್ದಾರೆ.
ಕುರುಬರಹುಂಡಿ ಗ್ರಾಮಸ್ಥರು ಸೇರಿ ಎಲ್ಲರೂ ಕಾಡಿನಲ್ಲಿರುವ ಮಾರಮ್ಮನ ದೇವಸ್ಥಾನಕ್ಕೆ ಶುಕ್ರವಾರ ಹೋಗಿ ಪೂಜೆ ನೆರವೇರಿಸಿ ಶನಿವಾರ ವಾಪಸ್ ಗ್ರಾಮಕ್ಕೆ ಬಂದು ಅಂಕದ ಅರಳಿಕಟ್ಟೆ ಬಳಿ ಮಾರಮ್ಮನ ವಿಗ್ರಹದ ಪ್ರಭಾವಳಿ ಇಟ್ಟಿದ್ದರು.
ಶನಿವಾರ ಮಾರಮ್ಮನ ಉತ್ಸವ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಮನೆಯಿಂದ ಬಂದ ಗೌಡಿಕೆ ಪುಟ್ಟರಾಜು ಅರಳಿಕಟ್ಟೆಯಲ್ಲಿ ಇಟ್ಟಿದ್ದ ಬೆಳ್ಳಿ ವಿಗ್ರಹವನ್ನು ಎತ್ತಿಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾರೆ ಎಂದು ಬೇಗೂರು ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದರು.
ದೂರು ಪಡೆದ ಪೊಲೀಸರು ಗ್ರಾಮಕ್ಕೆ ತೆರಳಿ ಪುಟ್ಟರಾಜು ಮಗನನ್ನು ಕರೆದುಕೊಂಡು ಬಂದರು. ಆ ವೇಳೆಗೆ ಬೆಳ್ಳಿ ವಿಗ್ರಹವನ್ನು ಹಾಲಹಳ್ಳಿ ಗ್ರಾಮದ ರಾಜಪ್ಪ ಪೊಲೀಸರ ಕೈಗೆ ಒಪ್ಪಿಸಿದರು. ಕಳ್ಳತನವಾದ ಬೆಳ್ಳಿ ವಿಗ್ರಹವನ್ನು ಕುಡಿದ ಮತ್ತಿನಲ್ಲಿ ಎತ್ತಿಕೊಂಡು ಹೋಗಿರಬಹುದು. ಜೊತೆಗೆ ಕದ್ದ ವಿಗ್ರಹ ಇದೀಗ ಪೊಲೀಸರ ಬಳಿಯಿದೆ. ಹಾಗಾಗಿ ಕೇಸು ಬೇಡ ಎಂದು ಗ್ರಾಮದ ಕೆಲವರು ಹೇಳಿದರು. ಆಗ ಸಿಡಿದೆದ್ದ ಇನ್ನು ಕೆಲ ಗ್ರಾಮಸ್ಥರು ಕಳ್ಳತನವಾಗಿರುವುದರಿಂದ ಕೇಸು ಹಾಕಿ ಎಂದು ಬಿಗಿ ಪಟ್ಟು ಹಿಡಿದರು. ಕೊನೆಗೆ ಒತ್ತಾಯದ ಮೇಲೆ ಬೇಗೂರು ಠಾಣಾ ಪೊಲೀಸರು ಕೇಸು ದಾಖಲಿಸಿದರು.
ವಿಗ್ರಹ ಎತ್ತಿಕೊಂಡು ಹೋದ ಪುಟ್ಟರಾಜು ಇದೀಗ ಗ್ರಾಮದಿಂದ ಹೊರ ಹೋಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.