ಮಹಿಳಾ ಗುಂಪು ಸಂಘಗಳಿಗೆ 10 ಲಕ್ಷ ಸಾಲ
ಕೊಳ್ಳೇಗಾಲ: ಮಹಿಳಾ ಸ್ವಸಹಾಯ ಸಂಘಗಳ ಗುಂಪು ಸಂಘಗಳಿಗೆ 10 ಲಕ್ಷ ಸಾಲ ನೀಡಲಾಗುತ್ತಿದ್ದು, ಕೈಗಾರಿಕೆ, ಇತರೆ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಸದ್ಬಳಕೆಗೆ ಮುಂದಾಗಬೇಕು ಎಂದು ನಗರಸಭೆ ಸ್ವರ್ಣಜಯಂತಿ ರೋಜ್ಗಾರ್ ಯೋಜನೆ ಅಧಿಕಾರಿ ಮಹದೇವ ಹೇಳಿದರು.
ಅವರು ಮುಡಿಗುಂಡದಲ್ಲಿ ನಡೆದ ಮಹಿಳಾ ಸಂಘಗಳ ವಾರ್ಷಿಕೋತ್ಸವ ಹಾಗೂ ಸುತ್ತುನಿಧಿ ವಿತರಣಾ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು ಸಂಘದ ಸದಸ್ಯರು ಸರ್ಕಾರಗಳು ನೀಡುವ ಸಾಲಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ನಂಜುಂಡ ಮಾತನಾಡಿ, ಸ್ವರ್ಣಜಯಂತಿ ರೋಜ್ಗಾರ್ ಯೋಜನೆ ವತಿಯಿಂದ ಮಹಿಳಾ ಸಂಘದ ಕುಟುಂಬಕ್ಕೆ ಕೌಶಲ್ಯ ತರಬೇತಿ ನೀಡುವ ಅವಕಾಶವಿದ್ದು, ಇದರ ಸದ್ಬಳಕೆಗೆ ಮುಂದಾಗಬೇಕು. ಕೇಂದ್ರ ಸರ್ಕಾರ ಸ್ವಸಹಾಯ ಸಂಘಗಳಿಗೆ ನೀಡುವ ಸಾಲಸೌಲಭ್ಯ ಸಕಾಲದಲ್ಲಿ ಪಡೆದು ಸಕಾಲದಲ್ಲಿ ಪಾವತಿಸುವ ಮೂಲಕ ಮಹಿಳೆಯರು ಸಂಘಗಳ ಬಲವರ್ಧನೆಗೆ ಶ್ರಮಿಸಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಮಹದೇವಪ್ರಸಾದ್, ಮಹಿಳಾ ಸಂಘದ ಪುಷ್ಪಲತಾ ಶಾಂತರಾಜು, ಬಸವಯ್ಯ, ಸೋಮಣ್ಣ, ರಂಗಸ್ವಾಮಿ ಸೇರಿದಂತೆ ಹಲವರಿದ್ದರು.