ಸುದ್ದಿ ಸಂಕ್ಷೇಪ
ಎನ್ಸಿಸಿ ತರಬೇತಿ ಅರ್ಜಿ ಆಹ್ವಾನ
ಮೈಸೂರು: ನಗರದ ಏರ್ ಎನ್ಸಿಸಿ ವಿಭಾಗವು 2013-14ನೇ ಸಾಲಿನ ವಾಯುಪಡೆ (ಏರ್) ಎನ್ಸಿಸಿ ತರಬೇತಿಗಾಗಿ ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಇರುವ ವಿದ್ಯಾರ್ಥಿಗಳು ಅರ್ಜಿಗಳನ್ನು 4ನೇ ಏರ್ ಸ್ಕ್ವಾಡ್ರನ್ ಎನ್ಸಿಸಿ, ಕೇರ್ ಆಫ್ ಅಧ್ಯಯನ ಸ್ಕೂಲ್, ಸಿಎ-2, ಆದಿಶಕ್ತಿ ರಸ್ತೆ, ಶಕ್ತಿನಗರ, ಮೈಸೂರು-29 ಕಚೇರಿಯಿಂದ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಪಡೆಯಬಹುದು. ವಿವರಗಳಿಗಾಗಿ ಕಚೇರಿ ದೂ.2417927, ಜೆಡ್ಲ್ಯೂಒ ಎಸ್.ಕೆ. ಪೊದ್ದಾರ್ ಮೊ. 7676308418, ಸಿ.ಪಿ.ಎಲ್. ಅಮಿತ್ ಪರಮಾರ್ ಮೊ. 9482510387 ಸಂಪರ್ಕಿಸಬಹುದು.
21ರಂದು ದಿನವಿಡಿ ಸಂಗೀತದ ಇಂಪು
ಮೈಸೂರು: ಪಂಡಿತ ತಾರಾನಾಥ ಫೌಂಡೇಷನ್ ವತಿಯಿಂದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜು. 21ರ ಬೆಳಗ್ಗೆ 8.30 ರಿಂದ ರಾತ್ರಿ 11 ರವರೆಗೆ ಇಂಪು ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರಾದ ಪಂ. ರಾಜೀವ ತಾರಾನಾಥ, ಪಂ. ಇಂದೂಧರ ನಿರೋಡಿ, ಉಸ್ತಾದ್ ಫಯ್ಯಾಜ್ ಖಾನ್, ಪರಮೇಶ್ವರ ಹೆಗಡೆ, ಡಾ. ನರಸಿಂಹ ವಡವಾಟಿ, ಪ್ರಬೀರ್ ಭಟ್ಟಾಚಾರ್ಯ, ಪೂರ್ಣಿಮಾ ಭಟ್ ಕುಲಕರ್ಣಿ, ಸಮೀರ್ ರಾವ್, ರವಿಶಂಕರ ಮಿಶ್ರ, ಸರ್ಫರಾಜ್ ಖಾನ್, ಸಂಜನಾ ಕೌಶಿಕ್, ನಿಶಾಂತ್, ಎಸ್. ಹಿರಣ್ಮಯಿ, ರವೀಂದ್ರ ಯಾವಗಲ್, ಡಾ. ರವೀಂದ್ರ ಕಾಮಕೋಟಿ, ವೀರಭದ್ರಯ್ಯ ಹಿರೇಮಠ, ಶ್ರೀರಾಮ ಭಟ್, ನಿತಿನ್ ರಾಜಾರಾಮ ಶಾಸ್ತ್ರಿ, ಪ್ರಭುರಾವ್, ರಮೇಶ್ ಧನ್ನೂರ್, ಭೀಮಾಶಂಕರ್, ಕಿರಣ್ ಯಾವಗಲ್, ಜಗದೀಶ್ ಕುರ್ತಕೋಟಿ, ಸುದತ್ತ, ಮಿಲಿಂದ್ ಭಾಗವಹಿಸುವರು. ಉಚಿತ ಪ್ರವೇಶ ಇದೆ.
4 ಮಂದಿ ಬಂಧನ
ಮೈಸೂರು: ಗಣೇಶನಗರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹರಾಜ ಮತ್ತು ಉದಯಗಿರಿ ಠಾಣೆ ಪೊಲೀಸರು 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಗಣೇಶನಗರ ನಿವಾಸಿಗಳಾದ ಕೋಳಿ ಮಂಜ, ರವಿ, ಸಿದ್ದರಾಮು ಮತ್ತು ಸಂತೋಷ್ ಬಂಧಿತ ಆರೋಪಿಗಳು. ಕ್ಷುಲ್ಲಕ ಕಾರಣ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಇತ್ತೀಚೆಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಸಂಬಂಧ ಉದಯಗಿರಿ ಮತ್ತು ಎನ್.ಆರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.