ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಥಿಲಾವಸ್ಥೆಯಲ್ಲಿರುವ ಕಣಗಾಲು ಅಂಗನವಾಡಿ ಕಟ್ಟಡ

Rashmi Kasaragodu
Updated On : 16 Jul 2013, 1:18 am

ಧರ್ಮಾಪುರ ನಾರಾಯಣ
ಕ.ಪ್ರ.ವಾರ್ತೆ   ಹುಣಸೂರು   ಜು. 15
ತಾಲೂಕಿನ ಕಣಗಾಲು ಗ್ರಾಮದ ಅಂಗನವಾಡಿ ದುಸ್ಥಿತಿಯಲ್ಲಿದ್ದು, ಸೂರು ಯಾವ ಸಂದರ್ಭದಲ್ಲಾದರೂ ಕುಸಿಯಬಹುದಾಗಿದೆ.
ಕೇಂದ್ರದ ಸುತ್ತಮತ್ತಲೂ ಮಲಮೂತ್ರದ ದುರ್ವಾಸನೆ, ಬೆಳೆದು ನಿಂತಿರುವ ಗಿಡಗಳ ಮಧ್ಯ ವಿಷಜಂತುಗಳ ವಾಸ, ಇಂತಹ ಅವ್ಯವಸ್ಥೆಯ ನಡುವೆಯೂ ಈ ಶಿಶುಪಾಲನಾ ಕೇಂದ್ರದಲ್ಲಿ ಶಿಸ್ತಿನಿಂದ ಕಲಿಯುವ ಮಕ್ಕಳು ಅಕ್ಕರೆಯಿಂದ ಕಲಿಸುವ ಶಿಕ್ಷಕಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಲವಲವಿಕೆಯಿಂದ ಕಲಿತು ಬಾಳಿ ಬೆಳಗಬೇಕಾದ ಮಕ್ಕಳ ಬಾಲ್ಯದ ಬುಡದಲ್ಲಿ  ಇಂತಹ ಅಪಾಯಕಾರಿ ವಾತಾವರಣ ತೀರ ಮನಕಲಕುವಂತದ್ದು. ಕಡ್ಡಾಯ ಶಿಕ್ಷಣದ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಒಮ್ಮೆಯಾದರೂ ತನ್ನ ಕಣ್ಣನ್ನು ತೆರೆದು ಈ ಅಂಗನವಾಡಿಯ ಮೂಲ ಸೌಲಭ್ಯದ ಕಡೆ ಗಮನಹರಿಸುವಂತೆ ಗ್ರಾಮಸ್ಥರ ಒತ್ತಾಯ.
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿನ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಪಟ್ಟಣದತ್ತ ಮುಖ ಮಾಡುತ್ತಿರುವ ಗ್ರಾಮೀಣ ಜನರ ಮನಸಿಗೆ ಕಣಗಾಲು ಅಂಗನವಾಡಿ ಕೇಂದ್ರದಲ್ಲಿ ಏನು ಕಡಿಮೆ ಇಲ್ಲ ಎಂದು ತೋರಿಸುತ್ತಿದೆ. ಆದರೆ, ಕಟ್ಟಡದ ಅಭದ್ರತೆ ಮಾತ್ರ ಕಾಡುತ್ತಿದೆ.
ಅಂಗನವಾಡಿ ಕೇಂದ್ರದಲ್ಲಿ ಕುಡಿಯಲು ನೀರಿಲ್ಲದೆ ಬೀದಿನಲ್ಲಿಗೆ ನೀರು ಬಿಟ್ಟಾಗ ನೀರು ತರಬೇಕು, ಶೌಚಾಲಯವಿಲ್ಲದೆ, ಕೇಂದ್ರದ ಸುತ್ತಮುತ್ತ ಮಲಮೂತ್ರ ವಿಸರ್ಜನೆ ಮಾಡಿಸಬೇಕು. ಸಮಸ್ಯೆ ಕೇಳುತ್ತಾ, ಹೇಳುತ್ತಾ ಹೋದರೆ ಸಮಸ್ಯೆಗಳ ಸುರಿಮಳೆ.
ತಾಪಂ ಅನುದಾನದಲ್ಲಿ ಕಳೆದ ಆರು ತಿಂಗಳ ಹಿಂದೆಯಷ್ಟೆ ಅಂಗನವಾಡಿ ಕೇಂದ್ರ ದುರಸ್ತಿಗೊಳಿಸಲಾಗಿತ್ತು. ಈ ಸಂಬಂಧವಾಗಿ ಗುತ್ತಿಗೆದಾರರು ಸುಣ್ಣ- ಬಣ್ಣ ಬಳಿದು ಬಿಲ್ಲು ಮಾಡಿಸಿಕೊಂಡಿದ್ದಾರೆ. ಗ್ರಾಮಸ್ಥರು ಮತ್ತು ನೌಕರರು ಕೇಳಿದರೆ ನಾಳೆ ಮಾಡಿಸುವೆ ಎಂದು ಕೆಲಸ ಮುಗಿದ ಬಳಿಕ ನನಗೆ ಈ ಕೆಲಸದ ಭಾಗ ಸೇರಿಲ್ಲ ಎಂದು ಗುತ್ತಿಗೆದಾರ ಕೈತೊಳೆದುಕೊಳ್ಳುತ್ತಾರೆ. ಆದರೆ, ಆಗಬೇಕಾದ ಕೆಲಸವನ್ನು ಸಂಬಂಧಿಸಿದ ಎಂಜಿನಿಯರ್ ಮಾಡಿಸಿಲ್ಲ. ಗುತ್ತಿಗೆದಾರನು ತಲೆಕೆಡಿಸಿಕೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟರಾಜು ಆರೋಪ.
ಅಂಗನವಾಡಿ ಕೇಂದ್ರದ ಮಕ್ಕಳ ಪಾಲನೆ ಮತ್ತು ಗುಣಮಟ್ಟ ಶಿಕ್ಷಣದ ಬಗ್ಗೆ ಎರಡು ಮಾತಿಲ್ಲ, ಆದರೆ ಕೇಂದ್ರದ ಸುತ್ತಮುತ್ತ ಬೆಳೆದು ನಿಂತಿರುವ ಗಿಡಗಳು ಹಾಗೂ ಮೂಲ ಸೌಲಭ್ಯದ ಕೊರತೆ ಹಾಗೂ ಸೂರು ಯಾವಾಗ ಬೇಕಾದರೂ ಬೀಳಬಹುದು ಎಂಬ ಅತಂಕದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ, ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ದುರಸ್ತಿಗೊಳಿಸಿದ ಗುತ್ತಿಗೆದಾರನಿಗೂ ಮನವಿ ಮಾಡಿದರೂ ಸ್ಪಂದಿಸಿಲ್ಲ. ಯಾರನ್ನು ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿ ಸರೋಜಮ್ಮ.
ಅಂಗನವಾಡಿ ಕೇಂದ್ರದ ದುಸ್ಥಿತಿ  ಬಗ್ಗೆ ತಾವು ಭೇಟಿ ನೀಡಿ ಅವಲೋಕಿಸಿದ್ದೇನೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಹ ನೀಡಿದ್ದೆ. 13ನೇ ಹಣಕಾಸು ಯೋಜನೆಯಡಿ 10 ಲಕ್ಷ ಅನುದಾನವನ್ನು ತಮ್ಮ ಇಲಾಖೆಗೆ ಪ್ರಥಮ ಬಾರಿಗೆ ನೀಡಿದ್ದಾರೆ. ಈ ಪೈಕಿ ಕಣಗಾಲು ಕೇಂದ್ರದ ಸೂರು ಸೇರಿದಂತೆ ಸಮಸ್ಯೆಗಳನ್ನು ಶೀಘ್ರವೆ ಬಗೆಹರಿಸುವೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಜಯಶೀಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement