ಸ್ಥಳೀಯ ಸಂಸ್ಥೆ ಅಧ್ಯಕ್ಷರ ನೇಮಕಕ್ಕೆ ಆಗ್ರಹ
ಕ.ಪ್ರ.ವಾರ್ತೆ ಟಿ.ನರಸೀಪುರ ಜು. 15
ರಾಜ್ಯ ಸರ್ಕಾರ ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಕೂಡಲೇ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಿ ನೂತನ ಚುನಾಯಿತ ಸದಸ್ಯರಿಗೆ ಅಧಿಕಾರ ನೀಡಬೇಕು ಎಂದು ಸಮಾಜ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅಯೂಬ್‌ಖಾನ್ ಹೇಳಿದರು.
ಇಲ್ಲಿನ ಹಳೇ ತಿರುಮಕೂಡಲಿನ ಶ್ರೀ ಆದಿಚುಂಚನಗಿರಿ ರಜಥೋತ್ಸವ ಭವನದಲ್ಲಿ ಸೋಮವಾರ ನಡೆದ ಸಮಾಜ ರಕ್ಷಣಾ ವೇದಿಕೆಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿರುವ ಸ್ಥಳೀಯ ಸಂಸ್ಥೆಗಳಿಂದಲೆ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಾಧ್ಯ. ಆದರೆ ಚುನಾಯಿತ ಸದಸ್ಯರು ಆಯ್ಕೆಯಾಗಿ ಹಲವಾರು ತಿಂಗಳುಗಳೆ ಕಳೆದರೂ ಸದಸ್ಯರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ವಿಳಂಬ ಧೋರಣೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ನಮ್ಮ ವೇದಿಕೆಯಿಂದ ಹೂಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮೈಸೂರು ಜಿಲ್ಲಾ ಘಟಕಕ್ಕೆ ನೂತನವಾಗಿ ಎಂ.ರಾಜು ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲೂಕು ಅಧ್ಯಕ್ಷ ಪಿ.ಶೇಖರ್, ಪ್ರಧಾನ ಕಾರ್ಯದರ್ಶಿ ಪಿ. ಮಹೇಶ್, ತಾಲೂಕು ಅಧ್ಯಕ್ಷ ಬಿ. ಶಿವಸ್ವಾಮಿ, ನಗರ ಉಪಾಧ್ಯಕ್ಷ ಯತಿರಾಜು, ವರುಣ ಹೋಬಳಿ ಅಧ್ಯಕ್ಷ ಲೋಕೇಶ್, ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ, ಮುಖಂಡರಾದ ಜಯಲಕ್ಷ್ಮೀ, ನಟರಾಜು ಇದ್ದರು.