ಆರ್ಟಿಇ ಉಲ್ಲಂಘನೆ ಖಂಡಿಸಿ ಕರವೇ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಜು. 16
ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸಿವೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ಈ ಶೈಕ್ಷಣಿಕ ಸಾಲಿನಲ್ಲಿ ಕೆಲವು ಖಾಸಗಿ ಶಾಲೆಗಳು ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಿಲ್ಲ. ಕೆಲವು ಶಾಲೆಯವರು ಆರ್ಟಿಇ ಅಡಿಯಲ್ಲಿ ಬಂದ ಅರ್ಜಿ ಸ್ವೀಕರಿಸಿ ನಂತರ ಆ ಅರ್ಜಿಯೊಂದಿಗೆ ನೀಡಲಾದ ಆದಾಯ ಪತ್ರವನ್ನು ಉದ್ದೇಶಪೂರ್ವಕವಾಗಿ ಮರುಪರಿಶೀಲನೆಗಾಗಿ ತಹಸೀಲ್ದಾರ್ಗೆ ಸಲ್ಲಿಸಿದ್ದಾರೆ. ಈ ಮೂಲಕ ವಿವಿಧ ಕಾರಣಗಳನ್ನು ನೀಡಿ ಆರ್ಟಿಇ ಅಡಿ ಯಾವುದೇ ಮಕ್ಕಳನ್ನೂ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಆರ್ಟಿಇ ಉಲ್ಲಂಘಿಸಿರುವ ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆರ್ಟಿಇ ಅಡಿ ಅರ್ಹ ಮಕ್ಕಳನ್ನು ಆಯಾ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಕರವೇ ಜಿಲ್ಲಾ ಗೌರವಾಧ್ಯಕ್ಷ ಹೊನ್ನೇಗೌಡ, ಪದಾಧಿಕಾರಿಗಳಾದ ಸುವರ್ಣಮ್ಮ ಬೆಳ್ಳಿಕಟ್ಟೆ, ಪಿ.ಕೆ. ಸುರೇಶ್, ಎಂ. ಶಿವಪ್ಪ, ಸಿ. ಯೋಗೇಶ್, ಕೆ. ಗಂಗಾಧರ್, ರವಿ, ಎಂ.ಡಿ. ಭಾನುಪ್ರತಾಪ್, ಮಂಜುನಾಥ್ ಇದ್ದರು.