ಎಂಸಿಸಿಐನಿಂದ ಪೊಲೀಸ್ ಆಯುಕ್ತರ ಭೇಟಿ
ಕ.ಪ್ರ.ವಾರ್ತೆ ಮೈಸೂರು ಜು. 16
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಮಂಗಳವಾರ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಲೀಂ, ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ಅಪರಾಧ ತಡೆಯುವಲ್ಲಿ ಸಹಕಾರ ನೀಡುವಂತೆ ಕೋರಿದರು. ಅದರಲ್ಲೂ ಹೆಲ್ಮೆಟ್ ಧರಿಸದ, ಕುಡಿದು ವಾಹನ ಓಡಿಸುವ ಸವಾರರು, ಬೆಲ್ಟ್ ಧರಿಸಿದ ಕಾರ್ ಚಾಲಕರ ಮೇಲೆ ದಂಡ ವಿಧಿಸುವುದಾಗಿ ತಿಳಿಸಿದರು.
ಎಂಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಮಾತನಾಡಿ, ಕೆ.ಆರ್. ವೃತ್ತದಿಂದ ಆಯುರ್ವೇದಿಕ್ ವೃತ್ತದವರೆಗೆ ಕಾನೂನುಬಾಹಿರವಾಗಿ ಹಾಗೂ ರಹದಾರಿ ಹೊಂದದೆ ವ್ಯಾಪಾರ ಮಾಡುವವರನ್ನು ಪ್ರೋತ್ಸಾಹಿಸದಂತೆ ಆಯುಕ್ತರಿಗೆ ಒತ್ತಾಯಿಸಿದರು. ನಗರದ ಮಧ್ಯಭಾಗದಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ತಡೆಗಟ್ಟುವಂತೆಯೂ ಮನವಿ ಮಾಡಿದರು.
ಎಂಸಿಸಿಐ ಉಪಾಧ್ಯಕ್ಷ ಎ.ಎಸ್. ಸತೀಶ್, ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ನಾರಾಯಣಗೌಡ, ದೇವರಾಜ ಮಾರುಕಟ್ಟೆ ಸಂಘದ ಅಧ್ಯಕ್ಷ ಎಸ್. ಮಹದೇವ್, ಹೆಬ್ಬಾಳು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎನ್.ಚ್. ಜಯಂತ್, ದೇವರಾಜ ಅರಸ್ ರಸ್ತೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಖಾಜಾ, ಎಪಿಎಂಸಿ ಮಾರುಕಟ್ಟೆ ಸಂಘದ ಕಾರ್ಯದರ್ಶಿ ಆರ್.ಎಂ. ಸತೀಶ್ ಇದ್ದರು.