ಸಶಕ್ತ ವ್ಯಕ್ತಿತ್ವದಿಂದ ಉತ್ತಮ ರಾಷ್ಟ್ರ
ಕ.ಪ್ರ.ವಾರ್ತೆ ಹುಣಸೂರು ಜು. 16
ವ್ಯಕ್ತಿಯ ಸಶಕ್ತ ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಣಸೂರು ಶಾಖೆಯು ಇಲ್ಲಿನ ಗುರುಬೂದಿ ಮಂಗಳಮಂಟಪ ಸಭಾ ಭವನದಲ್ಲಿ ಆಯೋಜಿಸಿದ್ದ ಗುರುಪೂಜಾ ಉತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರ ದೇಶ ನೈತಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳೂ ಸೇರಿದಂತೆ ಎಲ್ಲ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿದೆ.
ಇದಕ್ಕೆ ಪ್ರಮುಖ ಕಾರಣ ದೇಶವನ್ನಾಳುವ ನಾಯಕರು ನಾವು ಯಾರು, ನಮ್ಮ ಕಾರ್ಯವೇನು ಎಂಬುದನ್ನೆ ತಿಳಿಸುತ್ತಿಲ್ಲ. ಬದಲಾಗಿ ಜಾತ್ಯತೀತ, ಸಮಾಜವಾದ ಮತ್ತು ಪ್ರಜಾಪ್ರಭುತ್ವವೆಂಬ ಮೋಸದ ಪದಗಳನ್ನು ಅತಿರೇಕವಾಗಿ ವಿವರಿಸಿ, ನಮ್ಮತನವನ್ನೆ ಕೊಲ್ಲುತ್ತಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಮತಾಂತರ, ಭಯೋತ್ಪಾದನೆ ಹಾಗೂ ನಕ್ಸಲಿಸಂ ಅವಿರತವಾಗಿ ನಡೆಯುತ್ತಿದೆ.
ಪರಿಣಾಮ ದೇಶನಿಷ್ಠೆ, ರಾಷ್ಟ್ರಭಕ್ತಿ ಎಂಬ ಪದಗಳು ಅಪಹಾಸ್ಯಕ್ಕೀಡಾಗುತ್ತಿವೆ. ಹಿಂದೂ ಸಮಾಜದಲ್ಲಿನ ಅಸಮಾನತೆಯೆ ಇವೆಲ್ಲ ರೋಗಗಳಿಗೆ ಮೂಲ ಕಾರಣವಾಗಿದ್ದು, ಇದನ್ನು ಹೋಗಲಾಡಿಸಲು ಸಂಘ ಕಳೆದ 87 ವರ್ಷಗಳಿಂದಲೂ ಹೋರಾಡುತ್ತಿದೆ.
ಅಲ್ಲದೆ ತ್ಯಾಗ, ಸಮರ್ಪಣಾಭಾವ, ಸೇವೆ ಹಾಗೂ ಪರಾಕ್ರಮವೆಂಬ ಧ್ಯೇಯಮಂತ್ರಗಳನ್ನು ಬೋಧಿಸುವ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಮಾಣಗೊಳಿಸಿ ತನ್ಮೂಲಕ ರಾಷ್ಟ್ರ ನಿರ್ಮಾಣದತ್ತ ಹೆಜ್ಜೆ ಹಾಕಲು ಪ್ರೇರೇಪಿಸುವುದು ಸಂಘದ ಪ್ರಮುಖ ಕಾರ್ಯವಾಗಿದೆ ಎಂದು ತಿಳಿಸಿದರು.
ಕೃಷಿಕ ಸಂಪತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಇಂಗ್ಲಿಷ್ರಿಂದ ಆಳಿಸಿಕೊಂಡ ನಾವು ಇಂದು ಇಟಲಿಯವರಿಂದ ಆಳಿಸಿಕೊಳ್ಳುವ ದುರ್ಗತಿಗೆ ಬಂದಿದ್ದೇವೆ.
ಇದಕ್ಕೆಲ್ಲಾ ನಾವು ನಮ್ಮ ಶಕ್ತಿ ಮತ್ತು ಬಲ ಅರಿತಿಲ್ಲದಿರುವುದಾಗಿದೆ ಎಂದು ಹೇಳಿದರು.
ಸಂಘದ ಹಿರಿಯ ಸರಸಂಚಾಲಕ ರಾಮಚಂದ್ರಯ್ಯ, ತಾ. ಬಿಜೆಪಿ ಅಧ್ಯಕ್ಷ ಹನಗೋಡು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಹದೇವ ಹೆಗ್ಗಡೆ, ಮಾಜಿ ಅಧ್ಯಕ್ಷ ಕೆ.ಟಿ. ಗೋಪಾಲ್, ಮುಖಂಡರಾದ ಬೀಜಗನಹಳ್ಳಿ ನಾಗರಾಜಪ್ಪ, ಸ್ಲಂ ಮೋರ್ಚಾ ಅಧ್ಯಕ್ಷ ಕಿರಣ್ಕುಮಾರ್, ಸಂಘ ಪರಿವಾರದ ರಘುವೀರ್ ಜೀ, ಅಪ್ಪಿ ನಾಗರಾಜ್, ಮಹದೇವ ಬಾಗಲ್, ಸಚಿನ್, ಸಾಗರ್, ಮಂಜು, ರಮೇಶ್, ಮುಖಂಡರಾದ ಸತೀಶ್, ಪಿ.ಆರ್. ರಾಚಪ್ಪ, ರಾಧಾಕೃಷ್ಣ ಭಾಗವಹಿಸಿದ್ದರು.