146 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ
ಕ.ಪ್ರ. ವಾರ್ತೆ ಮೈಸೂರು ಜು.17
ಸರಸ್ವತಿಪುರಂನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಎಂಪ್ಲಾಯ್ಮೆಂಟ್ ಪಾರ್ಕ್ ಯೋಜನೆಯಡಿ ನಡೆಸಲಾದ ಉದ್ಯೋಗ ಮೇಳದಲ್ಲಿ 146 ಮಂದಿಗೆ ಸ್ಥಳದಲ್ಲೇ ಉದ್ಯೋಗ ನೇಮಕಾತಿ ಪತ್ರ ನೀಡಲಾಯಿತು.
ಈ ಮೇಳದಲ್ಲಿ ನಗರದ 16 ನಿಯೋಜಕರು ಭಾಗವಹಿಸಿದ್ದರು. ನೇಮಕಾತಿ ಬಯಸಿ ಬಂದಿದ್ದ ಸುಮಾರು 509 ಮಂದಿಯಲ್ಲಿ ಅಂತಿಮವಾಗಿ 146 ಮಂದಿ ಆಯ್ಕೆಯಾದರು. ಇದಕ್ಕೂ ಮೊದಲು ಉದ್ಯೋಗ ಮೇಳಕ್ಕೆ ಸರಸ್ವತಿಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಚಂದ್ರಶೇಖರ್ ಚಾಲನೆ ನೀಡಿದರು.
ಇದೇ ವೇಳೆ ಉದ್ಯೋಗ ಮೇಳ ಆಯೋಜಕರಾದ ಸಿ. ವಿಶ್ವನಾಥ್ ಭರಣಿ ಅವರನ್ನು ಸನ್ಮಾನಿಸಲಾಯಿತು. ಚಾಮರಾಜನಗರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಜನ್ನೂರು ಮಹದೇವ್, ಬಿ. ಮಟಗೇರಿ ಪಿಯು ಕಾಲೇಜಿನ ತಾಂಡವಮೂರ್ತಿ, ಝಲ್ಪಿಕಾರ್ ಕಳ್ಳಿಗುಡಿ, ವಿ. ನವೀನ್ಕುಮಾರ್ ಇದ್ದರು.
ಮೇಳದಲ್ಲಿ ನವಭಾರತ್ ಫರ್ಟಿಲೈಸರ್, ಅಶ್ವಿನಿ ಎಂಟರ್ಪ್ರೈಸಸ್, ಕೆಫೆ ಕಾಫಿ ಡೆ, ದಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್, ಸೋನಾ ಟಿವಿಎಸ್, ವಿಪಿಐ ಇನ್ನೋವೇಟಿವ್ ಸಲ್ಯೂಷನ್, ಎವರೆಡಿ ಇಂಡಸ್ಟ್ರಿಸ್ ಇಂಡಿಯಾ ಲಿ., ಡಾ. ರೆಡ್ಡಿ ಫೌಂಡೇಷನ್, ಬಿ.ಎಸ್. ಗೌಡ ಎಂಟರ್ಪ್ರೈಸಸ್, ಜ್ಯೂಬಿಲಿಯಂಟ್ ಫುಡ್ ವರ್ಕ್ ಲಿ., ಇನ್ಸ್ಪೈರ್ ಹೋಂಡಾ, ಎಲ್ಐಸಿ ಆಫ್ ಇಂಡಿಯಾ, ಹಿಂದೂಜಾ ಗ್ಲೋಬಲ್ ಸೆಲ್ಯೂಷನ್, ಯುನೀಕ್ ಡಿಟೆಕ್ಟೀವ್ ಆ್ಯಂಡ್ ಸೆಕ್ಯೂರಿಟಿ ಸರ್ವೀಸ್ ಪ್ರೈ.ಲಿ., ಲೇಬರ್ ನೆಟ್ ಸಂಸ್ಥೆಗಳು ಪಾಲ್ಗೊಂಡಿದ್ದವು.