27ರಂದು ರೈತ ಮುಖಂಡರ ಸಭೆ: ಸಚಿವರ ಆಶ್ವಾಸನೆ
ಕ.ಪ್ರ. ವಾರ್ತೆ, ಮೈಸೂರು, ಜು.17
ಬಣ್ಣಾರಿ ಅಮ್ಮನ್ ಕಾರ್ಖಾನೆಯು ಈ ಸಾಲಿನಲ್ಲಿ ಅರೆಯುವ ಕಬ್ಬಿಗೆ ಮುಂಗಡ ಹಣ ನಿಗದಿ ಹಾಗೂ ಹಳೆ ಬಾಕಿ ವಿಚಾರದ ಬಗ್ಗೆ ಚರ್ಚಿಸಲು ಜು. 27ರಂದು ರೈತ ಮುಖಂಡರು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯವರ ಸಭೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಭರವಸೆ ನೀಡಿದ್ದಾರೆ.
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿರುವ ಬಣ್ಣಾರಿ ಕಾರ್ಖಾನೆಯ ಎದುರು ಹಾಗೂ ವಿವಿಧೆಡೆ ಇರುವ ಶಾಖಾ ಕಚೇರಿಗಳಿಗೆ ಬೀಗ ಹಾಕಿ ನಡೆಸುತ್ತಿದ್ದ ಧರಣಿಯನ್ನು ಕೈಬಿಡಲಾಗಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ರೈತ ಮುಖಂಡರಾದ ಎಂ.ಎಸ್. ಅಶ್ವತ್ಥನಾರಾಯಣ ರಾಜೇ ಅರಸ್, ಹೊಸಕೋಟೆ ಬಸವರಾಜ್ ಅವರು ಸಚಿವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದಾಗ ಈ ಭರವಸೆ ದೊರೆತಿದೆ.