ಕ್ರಿಕೆಟ್: ಬಿವಿಬಿ ತಂಡಕ್ಕೆ ಜಯ
ಮೈಸೂರು: ಆಹ್ವಾನಿತ ಶಾಲೆಗಳ 14 ವರ್ಷದೊಳಗಿನವರ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಭಾರತೀಯ ವಿದ್ಯಾಭವನ ತಂಡವು ಉತ್ತಮ್ ಗೌಡ ಬಾರಿಸಿದ ಶತಕದ ನೆರವಿನಿಂದ ಜಯಗಳಿಸಿದೆ. ಕುವೆಂಪುನಗರದ ಕನ್ನೇಗೌಡ ಕ್ರೀಡಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜಯ ವಿಠಲ ತಂಡದ ವಿರುದ್ಧ, ಭಾರತೀಯ ವಿದ್ಯಾ ಭವನ ತಂಡವು 102 ರನ್ಗಳ ಅಂತರದಲ್ಲಿ ರನ್ ಗಳಿಕೆಯ ಆಧಾರದ ಮೇಲೆ ಜಯ ಗಳಿಸಿದೆ. ಟಾಸ್ ಗೆದ್ದು ವಿಜಯ ವಿಠಲ ತಂಡವು ಬಿವಿಬಿ ತಂಡ ಬ್ಯಾಟಿಂಗ್ಗೆ ಆಹ್ವಾನಿಸಿತು. ಬಿವಿಬಿ ತಂಡವು 35 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತು. ತಂಡದ ಉತ್ತಮ್ ವಿ. ಗೌಡ ಅಜೇಯ 118 ರನ್ ಗಳಿಸಿದರು. ಕೇವಲ 99 ಬಾಲ್ ಎದುರಿಸಿದ ಉತ್ತಮ್ ಗೌಡ ಅವರು, 10 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಅಂತೆಯೆ ಅನೂಪ್ 81 ರನ್ ಗಳಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು. ಉತ್ತಮ್ ಗೌಡ ಮತ್ತು ಅನೂಪ್ ಜೋಡಿಯು 2ನೇ ವಿಕೆಟ್ಗೆ 182 ರನ್ ಕಲೆ ಹಾಕಿದರು. ಬಳಿಕ ಬ್ಯಾಟಿಂಗ್ಗೆ ಇಳಿದ ವಿಜಯ ವಿಠಲ ತಂಡಕ್ಕೆ ಮಳೆ ಅಡ್ಡಿಯಾಯಿತು. 26ನೇ ಓವರ್ನಲ್ಲಿ ತಂಡ ಐದು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದ್ದಾಗ ಮಳೆ ಬಂದ ಕಾರಣಕ್ಕೆ ಪಂದ್ಯ ನಿಲ್ಲಿಸಲಾಯಿತು. ಬಳಿಕ ರನ್ ಗಳಿಕೆಯ ಆಧಾರದ ಮೇಲೆ ಬಿವಿಬಿ ತಂಡಕ್ಕೆ ಜಯದ ಬಾಗಿಲು ತೆರೆಯಿತು. ವಿಜಯ ವಿಠಲ ತಂಡದ ಪರ ಸುಧೀಂದ್ರ (37), ಶೀತಲ್ ಕೆ. ಆತ್ರೇಯ (22) ರನ್ ಗಳಿಸಿದರು. ರನ್ ಗಳಿಕೆಯಲ್ಲಿ ಬಿವಿಬಿ ತಂಡ 7.02 ಸರಾಸರಿ ಕಾಯ್ದುಕೊಂಡರೆ, ವಿಜಯ ವಿಠಲ ತಂಡವು 5.53 ಸರಾಸರಿಯಲ್ಲಿತ್ತು. ಮ್ಯಾನ್ ಆಫ್ ದಿ ಫೈನಲ್ಸ್ ಬಿವಿಬಿ ತಂಡದ ಉತ್ತಮ್ ವಿ. ಗೌಡ ಪಡೆದುಕೊಂಡರು.