ಬಾಕಿ ಪಾವತಿಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ
ಕ.ಪ್ರ. ವಾರ್ತೆ, ಮೈಸೂರು, ಜು.17
ಕಬ್ಬು ಬಾಕಿ ಕೊಡಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸದೆ, ಈ ಸಾಲಿನ ಕಬ್ಬು ದರ ನಿಗದಿಪಡಿಸದೆ ಕಾರ್ಖಾನೆ ಆರಂಭಿಸುವ ಮೂಲಕ ಜಿಲ್ಲಾಡಳಿತಕ್ಕೆ ಅವಮಾನ ಮಾಡಿದ್ದಾರೆ. ರೈತರಿಗೆ ಮೋಸ ಮಾಡಿರುವ ಕಾರ್ಖಾನೆ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕಾರ್ಖಾನೆಯಲ್ಲಿರುವ ಸಕ್ಕರೆ ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಬಾಕಿ ಕೊಡಿಸಬೇಕು ಎಂದು ಆಗ್ರಹಿಸಿದರು.
ಒಂದು ಟನ್ ಕಬ್ಬು ಉತ್ಪಾದಿಸಲು 3000 ಆಗುತ್ತದೆ. ರೈತರು ಬಣ್ಣಾರಿ ಕಾರ್ಖಾನೆಯಿಂದ ಭಿಕ್ಷೆ ಕೇಳುತ್ತಿಲ್ಲ. ನಮ್ಮ ಕಬ್ಬಿನಿಂದ ಬಂದಿರುವ ಲಾಭದ ಹಣ ಕಾನೂನುಬದ್ಧವಾಗಿ ಕೇಳುತ್ತಿದ್ದೇವೆ. ಕಳೆದ ವರ್ಷ ಸಕ್ಕರೆ ಇಳುವರಿ ಆಧಾರದ ಮೇಲೆ ರೈತರಿಗೆ ಹಣ ನೀಡುವುದಾಗಿ ಕಾರ್ಖಾನೆ ವ್ಯವಸ್ಥಾಪಕರು ಲಿಖಿತವಾಗಿ ನೀಡಿದ್ದರು. ಆದರೆ, ರೈತರಿಗೆ ನ್ಯಾಯಯುತ ಬೆಲೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ರಾಮೇಗೌಡ, ಈ ವಿಚಾರವನ್ನು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. 10 ದಿನದೊಳಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಆದರೆ, ರೈತರು ಇದಕ್ಕೆ ಒಪ್ಪದೆ, ಶೀಘ್ರದಲ್ಲೇ ಸಭೆ ಕರೆಯುವಂತೆ ಪಟ್ಟು ಹಿಡಿದರು.
ಈ ಹಿನ್ನೆಲೆಯಲ್ಲಿ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ ಡಾ. ರಾಮೇಗೌಡ, ಜು. 20ರಂದು ಸಭೆ ನಡೆಸುವುದಾಗಿ ಹೇಳಿದರು. ಅಲ್ಲದೆ, ಈ ಸಭೆಗೆ ಕಾರ್ಖಾನೆ ಮಾಲೀಕರನ್ನು ಕರೆಸುವುದಾಗಿ ಭರವಸೆ ನೀಡಿದರು.
ನಿಗದಿತ ಅವಧಿಯೊಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಜು. 27 ರಂದು ಜಿಲ್ಲಾದ್ಯಂತ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿ ಪ್ರತಿಭಟನೆ ಕೈಬಿಟ್ಟರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಕೂಡನಹಳ್ಳಿ ರಾಜಣ್ಣ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ್, ಕೆಂಡಗಣ್ಣಸ್ವಾಮಿ, ಬಿ.ಟಿ. ಪ್ರಭಾಕರ್, ಪುಟ್ಟಸ್ವಾಮಿ, ಗೌಡರ ಸಿದ್ದಲಿಂಗಪ್ಪ, ಚಿಕ್ಕಸ್ವಾಮಿ, ಮೂಕಳ್ಳಿ ಮಹದೇವಸ್ವಾಮಿ, ಕುಪ್ಯ ಜವರಯ್ಯ, ನಾರಾಯಣ್, ಕುಪ್ಪೇಗಾಲ ಅನಿಲ್, ಸತೀಶ್, ಕುರುಬೂರು ಸಿದ್ದೇಶ್, ಹಾಡ್ಯ ರವಿ, ಚಿಕ್ಕಲಿಂಗಯ್ಯ, ಮಚ್ಚರೆ ನಾಗಣ್ಣ ಇದ್ದರು.