ಭೂವಿಜ್ಞಾನ, ಪರಿಸರ ವಿಜ್ಞಾನ ವಿಲೀನ
ಕ.ಪ್ರ. ವಾರ್ತೆ ಮೈಸೂರು ಜು.17
ಭೂಗೋಳಶಾಸ್ತ್ರ, ಪರಿಸರ ವಿಜ್ಞಾನ ಹಾಗೂ ಭೂವಿಜ್ಞಾನ ವಿಷಯಗಳನ್ನು ಒಟ್ಟುಗೂಡಿಸಿ ಭೂವಿಜ್ಞಾನ ವಿಷಯದ ಕಡೆ ಒತ್ತು ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.
ಭೂಗೋಳ ವಿಜ್ಞಾನ ಸಂಘವು ಕ್ರಾಫರ್ಡ್ ವಿವಿಯ ಪರೀಕ್ಷಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶದ ಬೆಳವಣಿಗೆಗೆ ಭೂಗೋಳಶಾಸ್ತ್ರದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲೆ ನಾನು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿದ್ದಾಗ ಭೂಗೋಳಶಾಸ್ತ್ರ ಕೋರ್ಸ್ ಆರಂಭಿಸಿದೆ. ಈ ವಿಷಯವನ್ನು ಅಧ್ಯಯನ ಮಾಡುವವರ ಸಂಖ್ಯೆಯೂ ಹೆಚ್ಚಾಗಬೇಕಿದೆ ಎಂದರು.
ಅಧ್ಯಾಪಕರು ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಭೂಗೋಳಶಾಸ್ತ್ರ ವಿಷಯ ಬೋಧಿಸಬೇಕು. ನಿಮಗೆ ಬೇಕಾದ ಸೌಲಭ್ಯ ವಿವಿಯಿಂದ ಕೊಡಲು ಸಿದ್ಧರಿದ್ದೇವೆ. ಯಾವುದೇ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ 2006ರಿಂದ ನಿವೃತ್ತ ಪ್ರಾಧ್ಯಾಪಕರಾದ ಬಿ. ಚಂದ್ರಕಾಂತ, ಸಿ.ಬಿ. ಬಸವರಾಜು, ಎಂ. ಚಂದ್ರಶೇಖರ್, ಎಸ್. ಕೃಷ್ಣಪ್ಪ, ಕೃಷ್ಣಮೂರ್ತಿ, ಪರಶುರಾಮ್, ಎನ್.ಎಸ್. ಶೇಖರ್ಸ್ವಾಮಿ, ಎಂ. ಮಹದೇವಪ್ಪ, ಎ.ಎನ್. ಸೋಮಶೇಖರ್, ವಿಜಯ್ ಲೀಲಾರಾವ್, ಚಿಕ್ಕಸಿದ್ದೇಗೌಡ, ಎಂ. ಸೋಮಶೇಖರ್, ಸಿ.ವಿ. ಬಸವರಾಜು, ಎ.ಎಚ್. ರಾಮಯ್ಯ, ಎಸ್. ಶಂಭುಲಿಂಗಪ್ಪ, ನಾಗರಾಜಪ್ಪ, ಕುಮಾರ್, ಕೆ. ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಭೂಗೋಳ ವಿಜ್ಞಾನ ಸಂಘದ ಅಧ್ಯಕ್ಷ ಪ್ರೊ. ಡಿ.ಬಿ. ಮಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಪಿ. ಜಯರಾಮಯ್ಯ, ರಾಜಶೇಖರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.