ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳಲಿ: ಪ್ರೊ. ವಾನಳ್ಳಿ

Rashmi Kasaragodu
Updated On : 18 Jul 2013, 12:42 pm

ಕ.ಪ್ರ. ವಾರ್ತೆ   ಮೈಸೂರು   ಜು.17
ವಿದ್ಯಾರ್ಥಿಗಳು ಕೇವಲ ಓದಿಗೆ ಸೀಮಿತಗೊಳ್ಳಬಾರದು. ಅದರೊಟ್ಟಿಗೆ ಜೀವನ ಕೌಶಲ್ಯ ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಮೈಸೂರು ವಿವಿ ಸಾಮಾರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದ ನಿರ್ದೇಶಕ ಪ್ರೊ. ನಿರಂಜನ ವಾನಳ್ಳಿ ಹೇಳಿದರು.
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಂಪ್ರಭಾ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಎಂಜಿನಿಯರಿಂಗ್ ಓದಿರುವವರು ಸಹ ಜೀವನ ಕೌಶಲ್ಯ ಇಲ್ಲದೆ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಅವರಲ್ಲಿ ಕೆಲವರು ಎಂಬಿಎ ಓದಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಎಂಬಿಎ ಕೋರ್ಸಿನಲ್ಲಿ ಮಾನವ ಸಂಪನ್ಮೂಲ ವಿಷಯ ಇಲ್ಲದಿರುವುದು ಕಾರಣ ಎಂದರು.
ದ್ವಿತೀಯ ಪಿಯುಸಿ ಓದಿರುವ ವಿದ್ಯಾರ್ಥಿಗಳ ವಯಸ್ಸು ಹಸಿರಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮನೆಯವರು ಒತ್ತಡ ಹೇರದೆ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಮಾರ್ಗದರ್ಶನ ನೀಡಬೇಕೆ ವಿನಃ ಇಂಥದ್ದೆ ಓದು ಎಂದು ಒತ್ತಡ ಹೇರಬಾರದು. ವಿದ್ಯಾರ್ಥಿಗಳೂ ಅಷ್ಟೆ ಓದಿನ ಜತೆಗೆ ಸಾಹಿತ್ಯ, ಸಂಗೀತ, ನಾಟಕ, ಮಾತನಾಡುವ ಕಲೆ ಇತ್ಯಾದಿ ಪೂರಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಸಹಾಯಕ್ಕೆ ಬರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ಹಿಂದೆ ಕೈಬರಹದಲ್ಲಿ ನಿಯತಕಾಲಿಕೆ ಹೊರತರಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಈ ವ್ಯವಸ್ಥೆ ಬಳಸಿಕೊಂಡು ಎಲ್ಲಾ ಕಾಲೇಜುಗಳಲ್ಲಿ ವಾರ್ಷಿಕ ಸಂಚಿಕೆಗಳನ್ನು ಸ್ಪರ್ಧಾತ್ಮಕವಾಗಿ ಪ್ರಕಟಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹೆಚ್ಚಾಗಿ ಪ್ರಕಟಗೊಳ್ಳುತ್ತಿವೆ. ಈ ಅವಕಾಶವನ್ನು ಪಿಯುಸಿ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜಗತ್ತನ್ನು ಕುತೂಹಲದಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ವಿಜಯಶೇಖರ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸಿ.ಆರ್. ನಾಗರಾಜು, ಶಶಿಕಲಾ ಇದ್ದರು. ಪ್ರಾಂಶುಪಾಲ ಕೆ.ಎಸ್. ಪ್ರಭಾಕರ ರಾವ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement