ವಿವಿ: ಇಬ್ಬರು ನಿವೃತ್ತರ ನೇಮಕ ವಿರೋಧಿಸಿ ಅರ್ಜಿ
ಬೆಂಗಳೂರು: ಮೈಸೂರು ವಿಶ್ವವಿದ್ಯಾನಿಲಯದ ಇಬ್ಬರು ನಿವೃತ್ತ ಸಿಬ್ಬಂದಿಯನ್ನು ರಿಟ್ ಅರ್ಜಿಯ ವಿಶೇಷ ಅಧಿಕಾರಿ ಹಾಗೂ ಕುಲಪತಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ಶೇಖರ್ ಎಸ್.ಐಯ್ಯರ್ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ವಿವಿಯ ನಿಯಮದ ಪ್ರಕಾರ, ನಿವೃತ್ತರಾದ ಸಿಬ್ಬಂದಿಯನ್ನು ಮತ್ತೊಮ್ಮೆ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಂತಿಲ್ಲ. ಇದು ನಿಯಮ ಬಾಹಿರವಾಗಿ ನಡೆದಿರುವ ನೇಮಕ ಪ್ರಕ್ರಿಯೆ ಎಂದು ಆಕ್ಷೇಪಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ವಿವಿ ಹಾಗೂ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ಕೈದಿಗಳ ಬಿಡುಗಡೆ
ಮೈಸೂರು: ರಂಜಾನ್ ಹಬ್ಬ ಆಚರಣೆ ಅಂಗವಾಗಿ ಎಸ್ಡಿಪಿಐ ಕಾರ್ಯಕರ್ತರು ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಇಬ್ಬರು ಕೈದಿಗಳಿಗೆ ದಂಡ ಪಾವತಿಸಿ ಬುಧವಾರ ಬಿಡುಗಡೆ ಮಾಡಿಸಿದ್ದಾರೆ. ಮಂಡಿ ಮೊಹಲ್ಲಾ ನಿವಾಸಿ ಸಮಿವುಲ್ಲಾ ಮತ್ತು ಮಂಡ್ಯ ಜಿಲ್ಲೆ ಮಳವಳ್ಳಿ ನಿವಾಸಿ ಸತೀಶ್ ಬಿಡುಗಡೆಯಾದವರು. ಈ ಇಬ್ಬರು 2012ರಲ್ಲಿ ನಡೆದ ಪ್ರತ್ಯೇಕ ಗಲಾಟೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷೆ ಅವಧಿ ಮುಗಿದರೂ ದಂಡ ಪಾವತಿಸಲು ಆಗದೆ ಜೈಲಿನಲ್ಲಿದ್ದರು. ಈ ವಿಚಾರ ತಿಳಿದು ರಂಜಾನ್ ಅಂಗವಾಗಿ ಎಸ್ಡಿಪಿಐ ಮುಖಂಡರಾದ ಪಿ.ಎಂ. ಹುಸೇನ್, ಮುದ್ದಾಸೀರ್ ಅಲಿ ಖಾನ್ ಅವರು ಇಬ್ಬರು ಕೈದಿಗಳಿಗೆ ಒಟ್ಟು 14 ಸಾವಿರ ದಂಡ ಪಾವತಿಸಿ ಬಿಡುಗಡೆಗೊಳಿಸಿದರು. ಈ ವೇಳೆ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಜಯಸಿಂಹ ಇದ್ದರು.
ಅಪಘಾತ: ವ್ಯಕ್ತಿ ಸಾವು
ಮೈಸೂರು: ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಆರ್ಎಸ್ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆ ಎದುರು ಬುಧವಾರ ಮುಂಜಾನೆ ನಡೆದಿದೆ. ವಿಜಯನಗರ 2ನೇ ಹಂತ ನಿವಾಸಿ ನಿಂಗರಾಜು (57) ಮೃತಪಟ್ಟವರು. ಇವರು ಮೈಸೂರು ಗ್ರಾಮಾಂತರ 1ನೇ ಡಿಪೋದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕರಾಗಿದ್ದರು. ಇವರಿಗೆ ಪತ್ನಿ, ನಾಲ್ಕು ಮಕ್ಕಳು ಇದ್ದಾರೆ. ನಿಂಗರಾಜು ಮುಂಜಾನೆ ಕೆಲಸಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಕೆಆರ್ಎಸ್ ರಸ್ತೆ ಇಎಸ್ಐ ಆಸ್ಪತ್ರೆ ಬಳಿ ತಿರುವು ತೆಗೆದುಕೊಳ್ಳುತ್ತಿದ್ದಾಗ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಕೆ.ಪಿ. ಭೀಮಯ್ಯ, ಎಸಿಪಿ ಎನ್. ವಿಷ್ಣುವರ್ಧನ್, ಇನ್ಸ್ಪೆಕ್ಟರ್ ಅರುಣ್ ನಾಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿವಿ ಪುರಂ ಸಂಚಾರ ಠಾಣೆ ಎಸ್ಐ ಡಿ. ಯೋಗೇಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಲಾರಿ ವಶಪಡಿಸಿಕೊಂಡಿದ್ದಾರೆ.