ಗಮನ ಬೇರೆಡೆ ಸೆಳೆದು ಹಣ ಕಳವಿಗೆ ಯತ್ನ
ಹುಣಸೂರು: ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸುವ ಕಳ್ಳರ ಕೃತ್ಯ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದೆ. ರೋಟರಿ ಸಂಸ್ಥೆಯ ಖಜಾಂಚಿ ಅನಂತರಾಜೇ ಅರಸ್ ಕಳ್ಳರ ಕೈ ಚಳಕದಿಂದ ಪಾರಾದವರು. ಗುರುವಾರ ಕರ್ನಾಟಕ ಬ್ಯಾಂಕಿಗೆ ಹಣ ಕಟ್ಟಲು ಬಂದಿದ್ದ ಅವರಿಗೆ ಒಳ ಪ್ರವೇಶಿಸುತ್ತಿದ್ದಾಗ ಬಾಗಿಲ ಬಳಿ ಅಸ್ವಸ್ಥಗೊಂಡಿದ್ದ ವೃದ್ಧರೊಬ್ಬರ ಆರೈಕೆ ವೇಳೆ ತುರಿಕೆ ಪುಡಿಯನ್ನು ಕತ್ತಿನ ಬಳಿ ಹಾಕಿದ್ದಾರೆ. ಅವರಿಗೆ ತುರಿಕೆ ಹೆಚ್ಚಾಗುತ್ತಿದ್ದಂತೆ ಕೌಂಟರ್ ಬಳಿ ಹೆಚ್ಚು ಮಂದಿ ಇದ್ದುದ್ದರಿಂದ ಹಿಂದಿರುಗಿ ತಮ್ಮ ಸ್ಕೂಟರ್ನಲ್ಲಿ ಬ್ಯಾಗ್ ಇಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಈ ಹಣ ನಿಮ್ಮದೆ ಎಂದು ಪ್ರಶ್ನಿಸಿ ಬೇರೆಡೆ ಗಮನ ಸೆಳೆದು ಬ್ಯಾಗನ್ನು ಕಳ್ಳತನ ಮಾಡಲು ಯತ್ನಿಸುತ್ತಿರುವುದನ್ನು ಕಂಡ ಸಾರ್ವಜನಿಕರು ಕೂಗಿಕೊಂಡು ಹಿಡಿಯಲು ಮುಂದಾದಾಗ ಬ್ಯಾಗ್ ಎಸೆದು ಪರಾರಿಯಾಗಿದ್ದಾನೆ.