ರಂಗಾಸಕ್ತರ ಮನಸೂರೆಗೊಂಡ ಚಾಮಚಲುವೆ
ಕ.ಪ್ರ.ವಾರ್ತೆ ಹುಣಸೂರು ಜು. 18
ತಾಲೂಕಿನ ರಂಗಾಸಕ್ತರು ನಮ್ಮನ್ನು ಕರೆಸಿ ನಾಟಕವಾಡಿಸುವ ಮೂಲಕ ರಂಗಭೂಮಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಚಿತ್ರ ನಟ ಹಾಗೂ ನಿರ್ದೇಶಕ ಮಂಡ್ಯ ರಮೇಶ್ ಹೇಳಿದರು.
ಪಟ್ಟಣದ ಟ್ಯಾಲೆಂಟ್ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಒಳಾಂಗಣದ ರಂಗ ಮಂದಿರದಲ್ಲಿ ಚಾಮಚಲುವೆ ನಾಟಕ ಪ್ರದರ್ಶನ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಾಹಿತಿ-ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ, ದ್ವಾರಕೀಶ್, ಬಿಗ್ಬಾಸ್ ನಿರ್ದೇಶಕ ರಾಘವೇಂದ್ರ ಹುಣಸೂರು, ರಂಗಕರ್ಮಿ ಭಾಗೀರತಿ ಭಾಯಿ, ದೇವರಾಜ ಅರಸು ಅವರಂಥ ಮುತ್ಸುದ್ದಿ ರಾಜಕಾರಣಿ ನೀಡಿದ ಹುಣಸೂರು ತಾಲೂಕಿನ ರಂಗಾಸಕ್ತರು ನಮ್ಮ ತಂಡವನ್ನು ಕರೆಸಿ ನಾಟಕವಾಡಿಸುವ ಮೂಲಕ ರಂಗ ಭೂಮಿಗೆ ಪ್ರೋತ್ಸಾಹಿಸಿದ್ದಾರೆ ಎಂದರು.
ಪಟ್ಟಣದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಜಾನಪದ ಸೊಗಡಿನ ಚಾಮ ಚಲುವೆ ನಾಟಕ ರಂಗಾಸಕ್ತರ ಮನಸೂರೆಗೊಂಡಿತು. ನಾಟಕದ ಪ್ರತಿ ಸನ್ನಿವೇಶ ಪಾತ್ರವನ್ನು ಕಣ್ತುಂಬಿಕೊಂಡ ಸಭಿಕರು ಕಲಾವಿದರ ಅಭಿನಯ, ಜಾನಪದ ಹಾಡು, ಬೆಳಕು ಸಂಯೋಜನೆ, ಆಕರ್ಷಕ ರಂಗಜ್ಜಿಕೆ ಕಂಡು ಮೂಕ ವಿಸ್ಮಿತರಾದರು.ಟ್ಯಾಲೆಂಟ್ ಸಂಸ್ಥೆಯ ಮುಖ್ಯಸ್ಥ ನವೀನ್ ರೈ ಮಂಡ್ಯ ರಮೇಶ್ ಮಾರ್ಗದರ್ಶನದಲ್ಲಿ ಇಲ್ಲೂ ಕೂಡ ನಾಟಕ ತಂಡ ರಚಿಸಲಾಗುವುದು ಎಂದರು. ನಾಟಕದ ಲೇಖಕಿ ಸುಜಾತ ಅಕ್ಕಿ, ಹಿರಿಯ ರಂಗ ಕಲಾವಿದರಾದ ನಾರಾಯಣ ರೈ, ಎಸ್. ಜಯರಾಂ ಅವರನ್ನು ಗೌರವಿಸಲಾಯಿತು. ರೋಟರಿ ಶಾಲಾ ಸಮಿತಿ ಅಧ್ಯಕ್ಷ ಹಾಗೂ ರಂಗಾಸಕ್ತ ಆರ್. ಆನಂದ್, ಪ್ರಾಂಶುಪಾಲ ರವಿದೀಪಕ್, ಚಿತ್ರ ನಟ ಕು. ಅದಿತ್ಯ ನಾರಾಯಣಸ್ವಾಮಿ, ಕಲಾವಿದರಾದ ಕುಮಾರ್ ಅರಸೇಗೌಡ, ಚ. ನಾರಾಯಣಸ್ವಾಮಿ ಇದ್ದರು.