22ರಿಂದ ನಾಲೆಗೆ ನೀರು ಬಿಡುಗಡೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 19
ಜು. 22ರಿಂದ ತಾಲೂಕಿನ ಎಲ್ಲ ನಾಲೆಗಳಿಗೆ ಕಾವೇರಿ ನದಿಯಿಂದ ನೀರು ಹರಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಸಮೀಪದ ಹಳೆಎಡತೊರೆಯ ಅರ್ಕೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನಾಲೆ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಆರಂಭಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಉಳಿಕೆ ಕಾಮಗಾರಿಯನ್ನು ಮುಂದಿನ ವರ್ಷ ಆರಂಭಿಸಲಿದ್ದು, ವರ್ಷಾಂತ್ಯ ವೇಳೆಗೆ ಪೂರ್ಣವಾಗಿ ಮುಗಿಸಲಾಗುತ್ತದೆ. ಆದ್ದರಿಂದ ರೈತರು ತಮ್ಮ ಸಹಕಾರ ನೀಡಬೇಕೆಂದು ಕೋರಿದ ಅವರು, ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಅಣೆಕಟ್ಟೆಗಳು ಭರ್ತಿಯಾಗಿದ್ದು, ರೈತರು ಬೆಳೆ ಬೆಳೆದು ನಾಡು ಸಮೃದ್ಧಿಯಾಗಿರಲಿ ಎಂದು ನಾಡಿನ ಅಧಿದೇವತೆ ಚಾಮುಂಡೇಶ್ವರಿ ಮತ್ತು ಜೀವನದಿ ಕಾವೇರಿ ಮಾತೆಯನ್ನು ಬೇಡುವುದಾಗಿ ತಿಳಿಸಿದರು.
ನಾಲೆಗಳಿಗೆ ನೀರು ಹರಿಸುವ ಸಂಬಂಧ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಈಗಾಗಲೆ ಪರಿಶೀಲನೆ ನಡೆಸಿದ್ದು, ಜು. 22ರಂದು ಬಳ್ಳೂರು ಅಣೆಕಟ್ಟೆಯ ಬಳಿ ಚಾಮರಾಜ ಎಡದಂಡೆ ನಾಲೆಗೆ ಸಾಂಕೇತಿಕವಾಗಿ ನೀರು ಹರಿಸಲಿದ್ದು, ಅಂದೇ ಬಲದಂಡೆ, ರಾಮಸಮುದ್ರ ನಾಲೆಗಳು ಮತ್ತು ಮಿರ್ಲೆಶ್ರೇಣಿ ನಾಲೆಗಳಿಗೂ ನೀರು ಹರಿಸಲಾಗುತ್ತದೆ ಎಂದು ಶಾಸಕರು ವಿವರಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ತಾಪಂ ಉಪಾಧ್ಯಕ್ಷೆ ಶಕುಂತಲಾ ರಮೇಶ್, ಪುರಸಭಾ ಸದಸ್ಯರಾದ ಉಮೇಶ್, ಜೆಡಿಎಸ್ ಮುಖಂಡರಾದ ಮಿರ್ಲೆ ಧನಂಜಯ, ಹೊಸಹಳ್ಳಿ ಪುಟ್ಟರಾಜು, ಕೇಬಲಲ್ಮಂಜು, ಎಚ್.ಆರ್. ಮಧುಚಂದ್ರ, ಎಚ್.ಎಸ್. ಜಗದೀಶ್, ಸಿ.ಜೆ. ಮಧುಸೂಧನ, ಸಿ.ವಿ. ಗುಡಿ ನಂಜುಂಡಸ್ವಾಮಿ ಇದ್ದರು.