ಮಳೆ ಜೋರು; ಅನಾಹುತ ನೂರಾರು
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜು. 20
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರ ಮುಂದುವರಿದಿದ್ದು, ತಾಲೂಕಿನಾದ್ಯಂತ ವಾಸದ ಮನೆ, ತಂಬಾಕು ಹದಗೊಳಿಸುವ ಬ್ಯಾರನ್ ಗೋಡೆಗಳು ಕುಸಿದಿರುವ ಪ್ರಕರಣಗಳು ಜರುಗಿವೆ.
ಇಲ್ಲಿನ ಒಳಕೋಟೆ ನಿವಾಸಿ ರಾಜಮ್ಮ ಎಂಬವರ ವಾಸದ ಮನೆ ಕುಸಿದುಬಿದ್ದಿದೆ. ತಾಲೂಕಿನ ಚಿಕ್ಕನೇರಳೆ ಗ್ರಾಮದ ಪಾಪಯ್ಯ, ಜಾಫರ್ಖಾನ್ ಎಂಬವರಿಗೆ ಸೇರಿದ ತಂಬಾಕು ಬ್ಯಾರನ್ಗಳ ಗೋಡೆ ಕುಸಿದಿದ್ದು, ರೇವಣ್ಣ ಎಂಬವರಿಗೆ ಸೇರಿದ ಬ್ಯಾರನ್ಗೆ ಹೊಂದಿಕೊಂಡಿರುವ ವಾಸದ ಮನೆಯ ಗೋಡೆ, ನಿಲವಾಡಿ ಗ್ರಾಮದ ಪಾಪಯ್ಯ ಎಂಬುವರ ಬ್ಯಾರನ್ ಗೋಡೆ ಹಾಗೂ ಕೋಮಲಾಪುರ ಗ್ರಾಮದ ಲೋಕೇಶ್ ಎಂಬವರು ಕಟ್ಟುತ್ತಿದ್ದ ಆಶ್ರಯ ಮನೆ ಗೋಡೆ ಕುಸಿದುಬಿದ್ದಿದೆ.
ಅದೇ ಗ್ರಾಮದ ನಿಂಗೇಗೌಡ ಎಂಬವರ ಬ್ಯಾರನ್ಗೆ ಹೊಂದಿಕೊಂಡಂತಿರುವ ವಾಸದ ಮನೆಯ ಗೋಡೆ ಕುಸಿದಿದ್ದು, ವಡ್ಡರಹಳ್ಳಿ ಗ್ರಾಮದ ಸಣ್ಣೇಗೌಡ ಎಂಬುವರಿಗೆ ಸೇರಿದ ಮನೆಯ ಹಿಂಭಾಗದ ದನದ ಕೊಟ್ಟಿಗೆ ಭಾರಿ ಮಳೆಯಿಂದಾಗಿ ಕುಸಿದು ಲಕ್ಷಾಂತರ ಮೌಲ್ಯದ ಆಸ್ತಿ ನಷ್ಟವಾಗಿದೆ.
ತುಂಬಿ ಹರಿಯುತ್ತಿರುವ ಸೇತುವೆಗಳು: ತಾಲೂಕಿನ ಹಾರನಹಳ್ಳಿ ಹೋಬಳಿಯ ಕೊಪ್ಪ ಹಾಗೂ ಗಿರಗೂರು ಗ್ರಾಮಗಳ ನಡುವಿನ ಕಾಲುವೆಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟದಲ್ಲಿವೆ. ಅಲ್ಲದೆ ತಾಲೂಕಿನ ಬಿಳಗುಂದ ಹಾಗೂ ಮುತ್ತಿನಮುಳಸೋಗೆ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದ್ದು, ಈ ಭಾಗದ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಸಾರ್ವಜನಿಕರು ಸಂಚರಿಸುವಾಗ ಎಚ್ಚರ ವಹಿಸುವಂತೆ ಉಪ ತಹಸೀಲ್ದಾರ್ ಸಿ.ಜೆ. ರವಿಶಂಕರ್ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಶನಿವಾರವು ಸಹ ಮಳೆಯ ಆರ್ಭಟ ಮುಂದುವರಿದಿದ್ದು, ತಾಲೂಕಿನಾದ್ಯಂತ ಸರಾಸರಿ 33.20 ಮಿಮೀ ಮಳೆಯಾಗಿದೆ. ತಾಲೂಕಿನ ಬೈಲಕುಪ್ಪೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು 46.08 ಮಿಮಿ ಮಳೆಯಾಗಿದ್ದು, ಉಳಿದಂತೆ ಕಸಬಾ ವ್ಯಾಪ್ತಿಯಲ್ಲಿ 30.04 ಮಿಮಿ, ಅಳಲೂರು ವ್ಯಾಪ್ತಿಯಲ್ಲಿ 23 ಮಿಮಿ, ಬೆಟ್ಟದಪುರ ವ್ಯಾಪ್ತಿಯಲ್ಲಿ 37.04 ಮಿಮಿ, ಮುತ್ತೂರು ವ್ಯಾಪ್ತಿಯಲ್ಲಿ 45.05 ಹಾಗೂ ರಾವಂದೂರು ವ್ಯಾಪ್ತಿಯಲ್ಲಿ 18.02 ಮಿಮಿ ಮಳೆಯಾಗಿದೆ.
ಬೆಳೆಗೆ ಹಾನಿ: ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲೂಕಿನ ಕೆಲ ಭಾಗಗಳಲ್ಲಿ ಬೆಳೆದಿರುವ ತಂಬಾಕು, ಶುಂಠಿ ಹಾಗೂ ಮುಸುಕಿನ ಜೋಳದ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ರೈತರು ಜಮೀನು, ತೋಟ, ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.