ಮೂಲಭೂತ ಸೌಲಭ್ಯಕ್ಕೆ ಗ್ರಾಮಸ್ಥರ ಆಗ್ರಹ
ಕ.ಪ್ರ.ವಾರ್ತೆ ಬೈಲುಕುಪ್ಪೆ ಜು. 20
ಕುಡಿಯುವ ನೀರು, ಚರಂಡಿ, ಸಾರ್ವಜನಿಕ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವಂತೆ ಕೊಪ್ಪ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ನೋಡಲ್ ಅಧಿಕಾರಿ ದೇವಕುಮಾರ್ ಉಸ್ತುವಾರಿಯಲ್ಲಿ ಶುಕ್ರವಾರ ನಡೆದ ಗ್ರಾಮಸಭೆ ಸಭೆಯಲ್ಲಿ ಹಿಂದಿನ ಗ್ರಾಮಸಭೆಯ ನಡಾವಳಿ ಹಾಗೂ ಕಳೆದ ಸಾಲಿನ ಕ್ರಿಯಾ ಯೋಜನೆ ಅನುಷ್ಠಾನಗೊಂಡ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಹಲವು ವರ್ಷಗಳಿಂದ ರುದ್ರಭೂಮಿಗಾಗಿ ಹೋರಾಟ ಮಾಡುತ್ತಾ ಬಂದಿದ್ದರೂ, ಗ್ರಾಮಸಭೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳದೆ ನೆನೆಗುದಿಗೆ ಬಿದ್ದಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಸರ್ವೇ ನಂ.11 ರಲ್ಲಿರುವ ರುದ್ರಭೂಮಿ ಒತ್ತುವರಿಯಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾಪಂ ಅನುಮತಿ ಪಡೆಯದೆ ಅನಧಿಕೃತ ಹೋಂ ಸ್ಟೇಗಳು ತಲೆ ಎತ್ತಿವೆ. ಬಿ.ಎಂ. ರಸ್ತೆಯಲ್ಲಿ ಆಗಾಗ ಅಪಘಾತ ಸಂಭವಿಸುತ್ತಿರುವ ಬಗ್ಗೆ ಗ್ರಾಮಸ್ಥರು ದೂರಿದರು. ಈ ಬಗ್ಗೆ ಪೊಲೀಸ್ ಇಲಾಖೆ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಗ್ರಾಪಂ ಆಡಳಿತ ವ್ಯವಸ್ಥೆ ಪಾರದರ್ಶಕ ಆಗಿರಬೇಕು. ಕಾಯಂ ಪಿಡಿಒ ನೇಮಿಸುವ ಸಂಬಂಧ ಶಿಫಾರಸು ಮಾಡಲಾಗುವುದು ಎಂದು ನೋಡೆಲ್ ಅಧಿಕಾರಿ ದೇವ್ಕುಮಾರ್ ತಿಳಿಸಿದರು.
ಕೊಪ್ಪ ಗ್ರಾಪಂ ಅಧ್ಯಕ್ಷೆ ಗಂಗಾಬಿಕೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಾವಿತ್ರ ರಾಮಣ್ಣ, ಸದಸ್ಯರಾದ ರಾಮಚಂದ್ರು, ಮಂಜು, ಮಾಜಿ ಅಧ್ಯಕ್ಷ ಮುಕ್ಬುಲ್, ಮುಖಂಡರಾದ ಆವರ್ತಿ ಚಂದ್ರೇಶಖರ್, ಶಿವವೃದ್ದನಾಯಕ, ಇಂದ್ರಮ್ಮ, ಜಯಮ್ಮ, ರೇಣುಕಾಸ್ವಾಮಿ, ದ್ರಾಕ್ಷಾಣಿ, ಸ್ವಾಮಿ, ಗಿರೀಶ, ಜಯಶೀಲಾ, ಶಿವಮ್ಮ, ಕೆಬಿ ಅಧಿಕಾರಿ ಬಸವರಾಜ್, ಬೈಲುಕುಪ್ಪೆ ಉಪ ಠಾಣಾಧಿಕಾರಿ ರಾಚಪ್ಪ ಇದ್ದರು.