ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಾತಿ ನಿರ್ಮೂಲನೆಗೆ ಶರಣರ ತತ್ವ ಅವಶ್ಯ

Rashmi Kasaragodu
Updated On : 22 Jul 2013, 1:00 am

ಕ.ಪ್ರ.ವಾರ್ತೆ   ಮೈಸೂರು   ಜು. 21
ಸಮಾಜದಲ್ಲಿನ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಶರಣರ ಚಿಂತನೆ ಅವಶ್ಯ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ಶರಣ ಮಂಡಲಿಯು ಅಗ್ರಹಾರದ ಡಾ. ರಾಜೇಂದ್ರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
12ನೇ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆಗೆ ಒತ್ತು ನೀಡುವ ಮೂಲಕ ಅಂದಿನ ಕಾಲದಲ್ಲಿಯೇ ಪ್ರತಿಯೊಬ್ಬರನ್ನು ಜಾಗೃತಿಗೊಳಿಸುವ ಕಾಯಕ ಮಾಡಿದರು. ಆದರೆ, ಇಂದಿನ ಸಮಾಜದಲ್ಲಿ ಎಲ್ಲಾ ಕಡೆಯೂ ಜಾತಿ ವ್ಯವಸ್ಥೆ ಜಡ್ಡು ಕಟ್ಟಿದೆ. ಇಂತಹ ವ್ಯವಸ್ಥೆ ನಿರ್ಮಾಣ ಮಾಡಬೇಕಾದರೆ ಶರಣರ ಚಿಂತನೆಗಳು ಅವಶ್ಯಕ ಎಂದರು.
ಈ ಹಿಂದೆ ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಬಸವಣ್ಣವರ ವಚನ ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ಅಂತರ್ಜಾಲದ ಮೂಲಕ ಪ್ರಚಾರ ಮಾಡಲಾಯಿತು. ನಂತರ ವಿದೇಶಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಜನರು ವಚನಕ್ರಾಂತಿ ಪುರುಷನ ನಾಡಿನಿಂದ ಬಂದವರು ಎಂದು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ಎಂದಿಗೂ ಮರೆಯಲಾರೆ ಎಂದು ತಿಳಿಸಿದರು.
ಶರಣರ ವಚನಗಳನ್ನು ಹಾಗೂ ವಿಚಾರಧಾರೆಗಳನ್ನು ಕಳೆದ 60 ವರ್ಷಗಳಿಂದ ಪ್ರಚಾರ ಮಾಡುವುದರ ಜತೆಗೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಾ ಬಂದಿರುವ ಶರಣ ಮಂಡಳಿಯ ಕಾರ್ಯ ಶ್ಲಾಘನೀಯ. ಕನ್ನಡ ಚಳವಳಿಗಾರರಾದ ಮೂಗೂರು ನಂಜುಂಡಸ್ವಾಮಿ ಅವರು ಈ ಸಂಸ್ಥೆಯ ಅಧ್ಯಕ್ಷರಾಗಿ ಧಾರ್ಮಿಕ ಚಿಂತನೆಯ ಚಳವಳಿಗೂ ಮುಂದಾಗಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಸತತವಾಗಿ 5 ಬಾರಿ ಆಯ್ಕೆಯಾಗಿರುವ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಪ್ರಖ್ಯಾತ ಸಾಹಿತಿ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಪುತ್ರ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರಿನ ಪೊಲೀಸ್ ಉಪಆಯುಕ್ತ ಬಿ.ಆರ್. ರವಿಕಾಂತೇಗೌಡ, ಜೆಎಸ್‌ಎಸ್ ಸಂಸ್ಥೆಯಲ್ಲಿ  3 ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ಹಾಗೂ ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಭಾರತೀಯ ವಿದ್ಯಾಭವನದ ಅಧ್ಯಕ್ಷ ಡಾ. ಎ.ವಿ. ನರಸಿಂಹಮೂರ್ತಿ ಅವರಿಗೆ ಬಸವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಸಂಚಾಲಕ ಎಂ. ಚಂದ್ರಶೇಖರ್ ಇದ್ದರು.
ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಸ್ವಾಗತಿಸಿದರು. ಲೇಖಕಿ ಡಾ. ಅನುಸೂಯ ಕೆಂಪನಹಳ್ಳಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮ. ಜಯಪ್ರಕಾಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement