'ಪ್ರತಿ ಪೊಲೀಸ್ ಠಾಣೆಯಲ್ಲೂ ಕುಂದುಕೊರತೆ ಸಭೆ'
ಕ.ಪ್ರ.ವಾರ್ತೆ ಮೈಸೂರು ಜು. 21
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಭಾನುವಾರ ಸಾರ್ವಜನಿಕ ಕುಂದು- ಕೊರತೆ ಸಭೆ ನಡೆಯಿತು. ಆಯಾ ಠಾಣೆಯ ಇನ್ಸ್ಪೆಕ್ಟರ್, ಎಸ್ಐ ಮತ್ತು ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಅವರ ಕುಂದುಕೊರತೆ ಆಲಿಸಿ ಪರಿಹಾರ ಸೂಚಿಸಿದರು.
ಸಯ್ಯಾಜಿರಾವ್ ರಸ್ತೆಯಲ್ಲಿ ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ. ಬೋಟಿ ಬಜಾರ್ನಲ್ಲಿ ಸ್ವಚ್ಛತೆ ಕಾಪಾಡುವಂತೆ ದೇವರಾಜ ಠಾಣೆ ಪೊಲೀಸರಿಗೆ ಸಾರ್ವಜನಿಕರು ಮನವಿ ಮಾಡಿದರು.
ಇದೇ ರೀತಿ ಲಷ್ಕರ್, ನಜರ್ಬಾದ್, ಉದಯಗಿರಿ, ಮಂಡಿ, ನರಸಿಂಹರಾಜ, ವಿವಿ ಪುರಂ, ಮೇಟಗಳ್ಳಿ, ಜಯಲಕ್ಷ್ಮಿಪುರಂ, ವಿಜಯನಗರ, ಕೃಷ್ಣರಾಜ, ಲಕ್ಷ್ಮಿಪುರಂ, ಅಶೋಕಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ ಮತ್ತು ಕುವೆಂಪುನಗರ ಠಾಣೆಗಳಲ್ಲೂ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಯಿತು.
ನಗರದಲ್ಲಿ ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಇದಕ್ಕಾಗಿ ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ಅವಹಾಲು ಸ್ವೀಕರಿಸಿ ಪರಿಹಾರ ಸೂಚಿಸುವ ಕುಂದುಕೊರತೆ ಸಭೆಯನ್ನು ಪ್ರತಿ ತಿಂಗಳ 3ನೇ ಶನಿವಾರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ನೂರಾರು ಮಂದಿ ಹಾಜರು: ಮೈಸೂರು ದಕ್ಷಿಣ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ದೂರುದಾರರ ಸಭೆಯಲ್ಲಿ ನೂರಾರು ಮಂದಿ ಸಾರ್ವಜನಿಕರು ಹಾಜರಾಗಿದ್ದರು.
ಎಸ್ಪಿ ಅಭಿನವ್ ಖರೆ, ಡಿವೈಎಸ್ಪಿ ಟಿ. ಸಿದ್ದಪ್ಪ, ಸರ್ಕಲ್ ಇನ್ಸ್ಪೆಕ್ಟರ್ ನೇಮಿರಾಜು, ಎಸ್ಐಗಳಾದ ವೆಂಕಟೇಶಯ್ಯ, ಪುನೀತ್ ಮತ್ತು ಸಿಬ್ಬಂದಿ ದೂರು ಸ್ವೀಕರಿಸಿ, ಬಗೆಹರಿಸುವ ಭರವಸೆ ನೀಡಿದರು. ಅಲ್ಲದೆ, ಹಳೆ ದೂರುಗಳ ಪ್ರಗತಿ ಪರಿಶೀಲನೆ ಸಹ ನಡೆಯಿತು.
ಪೊಲೀಸರಿಗೆ ಕ್ಯಾನ್ಸರ್ ತಪಾಸಣೆ
ಮೈಸೂರು: ಜಿಲ್ಲಾ ಪೊಲೀಸ್ ಘಟಕವು ಭಾರತ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಪೊಲೀಸರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಜ್ಯೋತಿನಗರ ಡಿಆರ್ಎ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು. ದಕ್ಷಿಣ ವಲಯ ಐಜಿಪಿ ಡಾ. ರಾಮಚಂದ್ರರಾವ್ ಅವರು ಶಿಬಿರವನ್ನು ಉದ್ಘಾಟಿಸಿದರು. 45 ವರ್ಷ ಮೇಲ್ಪಟ್ಟ 120ಕ್ಕೂ ಹೆಚ್ಚಿನ ಪೊಲೀಸರು ಕ್ಯಾನ್ಸರ್ ತಪಾಸಣೆ ಮಾಡಿಸಿಕೊಂಡರು. ಎಸ್ಪಿ ಅಭಿನವ್ ಖರೆ ಇದ್ದರು.