ಸಹಕಾರ ಪದ್ಧತಿಯಿಂದ ಅಭಿವೃದ್ಧಿ: ಮೋಹನ್
ಕ.ಪ್ರ.ವಾರ್ತೆ ಟಿ.ನರಸೀಪುರ ಜು. 21
ಪರಸ್ಪರ ಸಹಾಯ ಮತ್ತು ಸಹಕಾರ ಪದ್ಧತಿಯನ್ನು ಸ್ವಸಹಾಯ ಸಂಘಟನೆಯಲ್ಲಿ ಸದ್ಬಳಕೆ ಮಾಡಿಕೊಂಡಿದ್ದರಿಂದ ಮಹಿಳೆಯರು ಆರ್ಥಿಕ ಕ್ಷೇತ್ರದಲ್ಲಿ ಸದೃಢತೆ ಸಾಧಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮೋಹನ ನಾಯಕ್ ಹೇಳಿದರು.
ಪಟ್ಟಣದ ಜೈನ ಭವನದಲ್ಲಿ ಭಾನುವಾರ ನಡೆದ ಲಕ್ಷ್ಮೀ ನರಸಿಂಹಸ್ವಾಮಿ ಸ್ವ ಸಹಾಯ ಮಹಿಳಾ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕುಟುಂಬದ ನಿರ್ವಹಣೆಯ ಹೊಣೆ ಹೊತ್ತಿದ್ದ ಮಹಿಳೆಯರು ಸ್ವ ಸಹಾಯ ಸಂಘ ರಚನೆ ಮಾಡಿಕೊಂಡು ಹಣ ಉಳಿತಾಯ ಮಾಡಿದ್ದರಿಂದ ಆರ್ಥಿಕವಾಗಿ ಸಬಲರಾಗಲು ಅವಕಾಶವಾಯಿತು. ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಂತಾಯಿತು ಎಂದರು.
ಮಹಿಳಾ ಸಂಘಟನೆಗಳನ್ನು ಮತ್ತಷ್ಟು ಬಲಪಡಿಸಲು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಹೊಸದೊಂದು ಗ್ರಾಮಾಭಿವೃದ್ಧಿ ಯೋಜನೆಯನ್ನು ತಂದು ರಾಜ್ಯಾದ್ಯಂತ ಶಾಖೆಗಳನ್ನು ತೆರೆದು ವಿನೂತನ ಸೌಲಭ್ಯಗಳನ್ನು ನೇರವಾಗಿ ಮಹಿಳೆಯರಿಗೆ ತಲುಪಿಸುತ್ತಿದ್ದಾರೆ. ಹೆಚ್ಚಿನ ಸಾಲ ಸೌಲಭ್ಯ ಹಾಗೂ ಸಹಾಯಧನ ನೀಡಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯರೂ ಕುಟುಂಬದ ಅಭಿವೃದ್ಧಿಗೆ ಸ್ವ ಸಹಾಯ ಸಂಘದಲ್ಲಿ ಸದಸ್ಯತ್ವ ಪಡೆದುಕೊಂಡು ದುಡಿದ ಹಣವನ್ನು ಉಳಿತಾಯ ಮಾಡಬೇಕು ಎಂದು ಅವರು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್. ಷಣ್ಮುಖಸ್ವಾಮಿ ಮಾತನಾಡಿದರು. ಜೈನ ಭವನದ ವ್ಯವಸ್ಥಾಪಕ ಮದನಲಾಲ್, ವಕೀಲ ಅಣ್ಣೇಗೌಡ, ಕಸಾಪ ಅಧ್ಯಕ್ಷ ಆರ್. ನಾಗೇಂದ್ರಕುಮಾರ್, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ರಾಮಣ್ಣ, ರಕ್ಷಣಾ ವೇದಿಕೆ ಅಧ್ಯಕ್ಷ ತಿರುಮಕೂಡಲು ಶ್ರೀನಿವಾಸ್, ಸರಸ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ವಸಂತಮ್ಮ, ಲಕ್ಷ್ಮೀ ನರಸಿಂಹಸ್ವಾಮಿ ಸಂಘದ ಅಧ್ಯಕ್ಷೆ ಮಂಗಳಮ್ಮ, ಕಾರ್ಯದರ್ಶಿ ಶ್ರುತಿ, ಕೋಶಾಧಿಕಾರಿ ಗೌರಮ್ಮ, ನಿರ್ದೇಶಕಿ ಎಸ್. ಸೌಮ್ಯ, ಪ್ರಮೀಳ, ಶಾರದ, ರಾಜಮ್ಮ, ರಾಜೇಶ್ವರಿ, ನಂಜಮ್ಮ, ಅಮೂಲ್ಯ, ಉಷಾ, ಫ್ರಿಮನ್ ಇದ್ದರು.