ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐಟಿ ದಾಳಿ ಖಂಡಿಸಿ ಧರಣಿ

Vishwanath S
Updated On : 24 Jul 2013, 12:28 pm

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಜು. 23
ಆದಿಚುಂಚನಗಿರಿ ಮಠ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ರಸ್ತೆ ತಡೆ ಮಾಡಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಿಂದ ಹೊರಟ ಸಮಾಜದ ಮುಖಂಡರು ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿಯಿಂದ ವಿ.ವಿ. ರಸ್ತೆ ಮೂಲಕ ಮೆರವಣಿಗೆಯಲ್ಲಿ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರಲ್ಲದೆ, ಒಕ್ಕಲಿಗ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, 10 ನಿಮಿಷ ಸಾಂಕೇತಿಕವಾಗಿ ಧರಣಿ ಕುಳಿತು ರಸ್ತೆ ತಡೆ ನಡೆಸಿದ ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ ಮಾತನಾಡಿ, ಕೇಂದ್ರ ಸರ್ಕಾರದ ಚಿತಾವಣೆ ಮತ್ತು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಮಠದ ಮೇಲೆ ಐಟಿ ದಾಳಿ ನಡೆದಿದೆ. 18 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಅನ್ನ ದಾಸೋಹ ನೀಡುತ್ತಿರುವ ಮಠವು ಧಾರ್ಮಿಕ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆ ಮಾಡುತ್ತಿದ್ದು, ಇಂತಹ ಮಠದ ಮೇಲೆ ದಾಳಿ ನಡೆಸಿರುವುದು ಮಠದ ಘನತೆಗೆ ಧಕ್ಕೆ ಉಂಟಾಗಿದೆ ಎಂದು ದೂರಿದರು.
ಮಿರ್ಲೆ ಶ್ರೀನಿವಾಸಗೌಡ, ಪರಶುರಾಮ್, ಕಾರ್ಯದರ್ಶಿ ಅಣ್ಣಾಜಿಗೌಡ, ನಿರ್ದೇಶಕರಾದ ಎಸ್.ಟಿ. ಕೀರ್ತಿ, ಎಸ್.ಪಿ. ತಮ್ಮಯ್ಯ, ಕಗ್ಗುಂಡಿಕುಮಾರ್, ಕೆ.ಆರ್. ಲಕ್ಕೇಗೌಡ, ನಾಗೇಂದ್ರಪ್ಪ, ತಾಪಂ ಸದಸ್ಯರಾದ ಸಾದಿಕ್‌ಖಾನ್, ಕೃಷ್ಣೇಗೌಡ, ಕೆ.ಎಲ್. ಜಗದೀಶ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement