ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೇಹದಂತೆ ಮನಸ್ಸಿಗೂ ಚಟುವಟಿಕೆಗಳುಬೇಕು: ಡಾ. ರವೀಂದ್ರಕುಮಾರ್ ಅಭಿಮತ

Vishwanath S
Updated On : 24 Jul 2013, 12:27 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 23
ದೇಹಕ್ಕೆ ವ್ಯಾಯಾಮ ಬೇಕಾಗಿರುವ ರೀತಿ ಮನಸ್ಸಿಗೂ ಕೂಡ ಓದು, ಅಭಿರುಚಿ ಮತ್ತು ಆಸಕ್ತಿಗಳೆಂಬ ಚಟುವಟಿಕೆಗಳು ಬೇಕಾಗಿದೆ ಎಂದು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಜಿ.ಕೆ. ರವೀಂದ್ರಕುಮಾರ್ ಹೇಳಿದರು.
ಇಲ್ಲಿನ ಊಟಿ ರಸ್ತೆಯ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರೀಡಾ ಚಟುವಟಿಕೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬದುಕಿನಲ್ಲಿ ಭರವಸೆ ಕಳೆದುಕೊಳ್ಳದೆ ಸಾಹಿತ್ಯಿಕ ಓದಿನ ಜತೆ ಗುರುತಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಅಂತಾರಾಷ್ಟ್ರೀಯ ವಾಲಿಬಾಲ್ ಪಟು ವಿ.ಆರ್. ಸನೋಜ್‌ಕುಮಾರ್ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮತನವನ್ನು ಯಾವುದಾದರೂ ಕ್ಷೇತ್ರದಲ್ಲಿ ಕಂಡುಕೊಳ್ಳಬೇಕು. ಸತತ ಪ್ರಯತ್ನದಿಂದ ಸಾಧನೆಯ ಎತ್ತರಕ್ಕೆ ಹೋಗಬಹುದು ಹಾಗೂ ನೀವು ಓದಿದ ಈ ಸಂಸ್ಥೆಯಲ್ಲಿ ನಿಮ್ಮ ಸಾಧನೆಯ ಗುರುತುಗಳನ್ನು ಬಿಟ್ಟು ಹೋಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಕಾಲೇಜುಗಳು ವಿದ್ಯಾರ್ಥಿಗಳನ್ನು ತಯಾರಿಸುವ ಕಾರ್ಖಾನೆಗಳಾಗದೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಅಷ್ಟೆ ಮುಖ್ಯ. ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಸತತವಾದ ಅಧ್ಯಯನ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್. ಮಲ್ಲಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರೀಡಾ ಸಮಿತಿಯ ಸಂಚಾಲಕ ಸಿ. ರೇವಣ್ಣ ಇದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಸೋಮಶೇಖರ ಸ್ವಾಗತಿಸಿದರು. ಎನ್. ನಾಗಲಾಂಬಿಕೆ ವಂದಿಸಿದರು. ಉಪನ್ಯಾಸಕ ಡಿ.ಎಂ. ಮಹೇಂದ್ರಮೂರ್ತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement