ನಾಡಿಗೋಸ್ಕರ ಕಾಡು ಹಾಳು: ಸ್ನೇಕ್ ಶ್ಯಾಮ್
ಕ.ಪ್ರ.ವಾರ್ತೆ , ಮೈಸೂರು , ಜು. 23
ಹಿಂದೆ ಕಾಡು ಇತ್ತು. ನಾಡಿರಲಿಲ್ಲ, ಆದರೆ ಇಂದು ನಾಡಿಗೋಸ್ಕರ ಕಾಡನ್ನು ನಾಶ ಮಾಡುತ್ತಿದ್ದೇವೆ ಎಂದು ಉರಗ ತಜ್ಞ ಸ್ನೇಕ್ ಶ್ಯಾಮ್ ವಿಷಾದಿಸಿದರು.
ವಿಜಯವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜಗತ್ತಿನಲ್ಲಿ ಶೇ.36 ಕಾಡಿರಬೇಕು. ಆದರೆ ಅದು ನಶಿಸಿ ಬರಿ ಶೇ.16 ರಷ್ಟು ಕಾಡು ಉಳಿದಿದೆ. ಇದರಲ್ಲಿ ಶೇ.8 ಕುರುಚಲು ಗಿಡಗಳಾಗಿದ್ದು, ಮಿಕ್ಕ ಶೇ.8 ಮಾತ್ರ ಉಪಯುಕ್ತ ಗಿಡಮರಗಳಾಗಿವೆ. ಜನಸಂಖ್ಯಾ ಸ್ಫೋಟದಿಂದ ಪರಿಸರ ನಾಶವಾಗುತ್ತಿದೆ. ಹಿಂದಿನ ಕಾಲದಲ್ಲಿ ಆಹಾರ ಇರುತ್ತಿತ್ತು ಹಣ ಇರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಹಣ ಇದೆ ಆಹಾರ ಇಲ್ಲ. ಇದಕ್ಕೆ ಕಾರಣ ಪರಿಸರ ಮಾಲಿನ್ಯ ಎಂದು ತಿಳಿಸಿದರು.
ನಂತರ ಶ್ಯಾಮ್ ಅವರು ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ, ಹಾವುಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಿ. ರಶ್ಮಿ ಪರಿಸರ ಸಂಘದ ಧ್ಯೋಯೋದ್ದೇಶಗಳನ್ನು ತಿಳಿಸಿದರು. ಪರಿಸರ ಸಂಘದ ಸಂಚಾಲಕಿ ಸಂಗೀತಾ ಇದ್ದರು. ಐಶ್ವರ್ಯ ರಾಜ್ ನಿರೂಪಿಸಿದರು. ಶರಧಿ ಸ್ವಾಗತಿಸಿದರು. ಅನಘ ಕೃಷ್ಣ ವಂದಿಸಿದರು.