ರಸ್ತೆಗೆ ಅಡ್ಡಲಾಗಿದ್ದ ತಡೆಗೋಡೆ ತೆರವು
ಕ.ಪ್ರ.ವಾರ್ತೆ , ಬೈಲುಕುಪ್ಪೆ , ಜು. 23
ಇಲ್ಲಿನ ಗ್ರಾಪಂ ವ್ಯಾಪ್ತಿಯ ದೊಡ್ಡಹರವೆ ಗ್ರಾಮದ ಹೊನ್ನಮ್ಮ ಅವರು ಸಾರ್ವಜನಿಕರ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಉಪ ತಹಸೀಲ್ದಾರ್ ರವಿಶಂಕರ್ ನೇತೃತ್ವದಲ್ಲಿ ಜೆಸಿಬಿ ಮುಖಾಂತರ ಧ್ವಂಸ ಮಾಡಿ 25 ಅಡಿ ರಸ್ತೆಯನ್ನು ತೆರೆವುಗೊಳಿಸಿದರು.
ಗ್ರಾಮದ ಲೇಟ್ ಹೊನ್ನಯ್ಯ ಅವರ ಪತ್ನಿ ಹೊನ್ನಮ್ಮ ಸರ್ವೆ ನಂ. ಒಂದರಲ್ಲಿ ಸಾರ್ವಜನಿಕರ ರಸ್ತೆಗೆ ಸುಮಾರು 2005 ರಿಂದ ತಡೆಗೋಡೆ ನಿರ್ಮಿಸಿಕೊಂಡು ತೊಂದರೆ ಕೊಡುತ್ತಿದ್ದರು. ಇಲ್ಲಿಯ ಸಾರ್ವಜನಿಕರು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಏನು ಪ್ರಯೋಜನವಾಗದ ಸಂದರ್ಭದಲ್ಲಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅಲ್ಲಿಯ ಸಾರ್ವಜನಿಕರು ಚುನಾವಣಾ ಬಹಿಷ್ಕಾರ ಹಾಕಿದರು.
ಇದರ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ತಹಸೀಲ್ದಾರ್ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಕಾಂತರಾಜ್, ನೇತೃತ್ವದ ತಂಡ ದೊಡ್ಡಹರವೆ ಗ್ರಾಮದ ಸ್ಥಳಕ್ಕೆ ಧಾವಿಸಿ ಚುನಾವಣಾ ಮುಗಿದ ನಂತರ ಅಕ್ರಮವಾಗಿ ನಿರ್ಮಿಸಿದ ತಡೆಗೋಡೆ ಹಾಗೂ ಮನೆಯನ್ನು ತೆರವುಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡಿ ಸಾರ್ವಜನಿಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಮೂರು ದಿನಗಳ ಕಾಲಾವಕಾಶ: ಅಕ್ರಮವಾಗಿ ಮನೆ ಕಟ್ಟಿರುವುದನ್ನು ಮನೆಯ ಮಾಲೀಕರಾದ ಹೊನ್ನಮ್ಮ ಅವರಿಗೆ ಮನೆ ಖಾಲಿ ಮಾಡಲು ಮೂರು ದಿನ ಅವಕಾಶ ನೀಡಿದ್ದು, ಅಲ್ಲಿರುವ ಹೆಂಚುಗಳು, ಇನ್ನಿತರ ಸಾಮಾನುಗಳನ್ನು ತೆಗೆದುಕೊಳ್ಳುತ್ತೇವೆಂದು ಆಕೆ ಪತ್ರದ ಮುಖಾಂತರ ಮನವಿ ಮಾಡಿಕೊಂಡ ಹಿನ್ನೆಲೆ ಅವರಿಂದ ಸಹಿ ಪಡೆದು ಮೂರು ದಿನಗಳು ಮಾತ್ರ ಕಾಲಾವಕಾಶ ಕೊಟ್ಟಿದ್ದೇವೆ. ನಂತರ ಯಾವುದೆ ಕಾಲಕ್ಕೂ ಕಾಲಾವಕಾಶ ನೀಡುವುದಿಲ್ಲ, ಅಕ್ರಮವಾಗಿ ನಿರ್ಮಿಸಿಕೊಂಡ ಮನೆಯನ್ನು ತೆರೆವುಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಕಂದಾಯಾಧಿಕಾರಿ ಶ್ರೀಧರಮೂರ್ತಿ, ಬೈಲುಕುಪ್ಪೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಯೋಗ, ಸರ್ವೆ ಮುನಿಯಪ್ಪ, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಬೈಲುಕುಪ್ಪ ಪೊಲೀಸ್ ಠಾಣಾಧಿಕಾರಿ ರಾಚಪ್ಪ ಹಾಗೂ ಸಿಬ್ಬಂದಿವರ್ಗ ಹಾಗೂ ಕಂದಾಯ ಇಲಾಖಾ ಸಿಬ್ಬಂದಿ ರಾಜು, ಗ್ರಾಪಂ ಸದಸ್ಯರಾದ ಮಂಜು ಮತ್ತು ನೌಕರರಾದ ರಾಮಕೃಷ್ಣ ಹಾಗೂ ಗ್ರಾಮಸ್ಥರು ಇದ್ದರು.