ಯಕ್ಷಗಾನಕ್ಕೆ ಕಾಲಮಿತಿ ಸಲ್ಲ: ಸಚಿವ ರಮಾನಾಥ ರೈ
ಕ.ಪ್ರ.ವಾರ್ತೆ , ಮೈಸೂರು , ಜು.21
ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಬಯಲಾಟಕ್ಕೆ ಕಾಲಮಿತಿ ಹೇರುವುದು ಸಲ್ಲದು ಎಂದು ಅರಣ್ಯ ಸಚಿವ ರಮಾನಾಥ ರೈ ಅಭಿಪ್ರಾಯ ಪಟ್ಟರು.
ಬೆಳ್ಳಿಪ್ಪಾಡಿ ಯಕ್ಷ ಸಾಂಸ್ಕೃತಿಕ ವೇದಿಕೆ ನಗರದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿರುವ ಐದು ದಿನಗಳ ಯಕ್ಷ ಪಂಚಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಒಂದು ಕಾಲದಲ್ಲಿ ಕರಾವಳಿ ಪ್ರದೇಶದಲ್ಲಿ ನಳನಳಿಸುತ್ತಿದ್ದ ಯಕ್ಷಗಾನ ಇದೀಗ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಇದರೊಂದಿಗೆ ಕಾಲಮಿತಿ ಎಂಬ ಭಿನ್ನ ಹೇಳಿಕೆಗಳೂ ಮತ್ತಷ್ಟು ನೋವು ತರುತ್ತಿದೆ ಎಂದರು.
ಕರಾವಳಿ ಪ್ರದೇಶದ ಜಾನಪದ ಕಲೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿರುವುದು ನಮಗೆಲ್ಲ ಸಂತೋಷ ತಂದಿದೆ. ಸರ್ಕಾರ ಈ ಕಲೆಯನ್ನು ಉಳಿಸಲು ಇನ್ನಷ್ಟು ಕಾಳಜಿ ವಹಿಸಬೇಕಿದೆ. ಕೇರಳದಲ್ಲಿ ಕಥಕ್ ಉಳಿಸಲು ಕಲಾಮಂಡಲ ರಚಿಸಿರುವ ಹಾಗೆ ನಮ್ಮ ಸರ್ಕಾರವೂ ಸಂಸ್ಥೆ ಸ್ಥಾಪಿಸಲು ಮುಂದಾಗಬೇಕು. ತೆಂಕುತಿಟ್ಟು, ಬಡಗಲತಿಟ್ಟು ಯಕ್ಷಗಾನ ಪ್ರಕಾರಗಳು ಇನ್ನು ಜೀವಂತವಾಗಿವೆ. ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ತೆಂಕುತಿಟ್ಟು ಬೆಳೆಸುತ್ತಿದ್ದಾರೆ. ಶಿವರಾಮ ಕಾರಂತರು ಬಡಗಲತಿಟ್ಟು ಬೆಳೆಸಿದ್ದರು. ಅವರ ನಂತರ ಹಲವು ಮಹನೀಯರು ಬೆಳೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.