12 ಕೋಟಿ ಸಾಲ ಮನ್ನಾ
ಕೆ.ಆರ್. ನಗರ: ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪ್ರಸುತ್ತ ಸಾಲಿನಲ್ಲಿ ರೈತರಿಗೆ 25 ಕೋಟಿ ಕೃಷಿ ಸಾಲ ನೀಡಲಾಗಿದ್ದು, ಈ ಪೈಕಿ ಸಾಲ ಮನ್ನಾ ಯೋಜನೆಯಡಿ 12 ಕೋಟಿ ಸಾಲ ಮನ್ನಾ ಆಗಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಎಸ್. ಸಿದ್ದೇಗೌಡ ಹೇಳಿದರು.
ತಾಲೂಕಿನ ತಿಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೆಳೆ ಸಾಲದ ಚೆಕ್ ವಿತರಿಸಿ ಮಾತನಾಡಿ, ಈ ಬಾರಿಯು 13 ಕೋಟಿ ಸಾಲ ವಿತರಿಸಿದ್ದು. 30 ಕೋಟಿ ಕೃಷಿ ಸಾಲ ನೀಡುವ ಗುರಿ ಹೊಂದಿರುವುದರಿಂದ ರೈತರು ಇದರ ಸದುಪಯೋಗ ಪಡೆಯಬೇಕು ಎಂದರು.
ಸರ್ಕಾರದ ಆದೇಶದಂತೆ 2 ಲಕ್ಷವರೆಗೆ ಬಡ್ಡಿರಹಿತ ಸಾಲ ನೀಡುವುದಲ್ಲದೆ, ಒಂದು ಎಕರೆ ಬತ್ತದ ಬೆಳೆಗೆ 15 ಸಾವಿರ, ಅರಿಶಿನ, ಬಾಳೆ ಮತ್ತು ಕಬ್ಬು ಬೆಳೆಗೆ 35 ಸಾವಿರ, ತಂಬಾಕು ಒಂದು ಬ್ಯಾರೆನ್ಗೆ 50 ರಿಂದ 75 ಸಾವಿರದವರೆಗೆ ಸಾಲ ನೀಡಲಾಗುವುದು. ರೈತರು ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಚಿಕ್ಕರಾಮನಾಯಕ, ನಿರ್ದೇಶಕ ಟಿ.ಎಲ್. ಪರಶಿವಮೂರ್ತಿ, ಕೆ.ಆರ್. ರಮೇಶ್, ಟಿ. ರಾಜೇಗೌಡ, ತಾಪಂ ಮಾಜಿ ಅಧ್ಯಕ್ಷ ಡಿ. ಧರಣೇಂದ್ರ, ಮಹದೇವ ಇದ್ದರು.