24 ಮಲೇರಿಯಾ ಪ್ರಕರಣ ಪತ್ತೆ: ಡಾ. ಮಂಜುನಾಥ್
ಕ.ಪ್ರ.ವಾರ್ತೆ , ಕೆ.ಆರ್. ನಗರ , ಜು. 30
ಜಿಲ್ಲೆಯಲ್ಲಿ ಈವರೆಗೆ 24 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ರೋಗ ತಡೆಗೆ ಅಗತ್ಯ ಮುಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮಂಜುನಾಥ್ ಹೇಳಿದರು.
ಇಲ್ಲಿನ ಹೆರಿಗೆ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೇ.10ಕ್ಕಿಂತ ಹೆಚ್ಚು ಜ್ವರ ಪ್ರಕರಣಗಳು ಹಳ್ಳಿಗಳಲ್ಲಿ ಕಂಡುಬಂದರೆ, ಅಲ್ಲಿ ರಕ್ತ ಪರೀಕ್ಷಿಸಿ ಸಾಮೂಹಿಕ ಮಾತ್ರೆ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳ ತಾಣವನ್ನು ನಾಶಪಡಿಸಿದರೆ ಮಲೇರಿಯಾದಿಂದ ದೂರ ಇರಬಹುದು ಎಂದು ಸಲಹೆ ನೀಡಿ, ಸಮುದಾಯದ ಸಹಕಾರ ಈ ಕೆಲಸಗಳಿಗೆ ಅತ್ಯಂತ ಅಗತ್ಯ ಎಂದು ಹೇಳಿದರು.
ತಾ. ಆರೋಗ್ಯಾಧಿಕಾರಿ ಡಾ.ಶಿವಪ್ರಸಾದ್ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ನಾಗಶೆಟ್ಟಿ, ಡಾ. ವಿನುತಾ, ಭೀಮಣ್ಣ, ಲೋಕನಾಥ, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.