ಜಿಲ್ಲೆಯ 2.41 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ
ಕ.ಪ್ರ.ವಾರ್ತೆ , ಮೈಸೂರು , ಜು. 30
ಜಿಲ್ಲೆಯಲ್ಲಿ 2013- 14ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 4,20,195 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿಯಿದ್ದು, ಸೋಮವಾರದವರೆಗೆ ಒಟ್ಟು 2,41,680 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.58 ಬಿತ್ತನೆಯಲ್ಲಿ ಪ್ರಗತಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಆರ್. ಕೃಷ್ಣಯ್ಯ ತಿಳಿಸಿದ್ದಾರೆ.
ಇದರಲ್ಲಿ ಶೇ. 78 ಅಂದರೆ 2,34,239 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಹಾಗೂ ಶೇ.6 ಅಂದರೆ 7,441 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಯಾದ ಒಟ್ಟು ಕ್ಷೇತ್ರದ ಪೈಕಿ 47,070 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ, 46,456 ಹೆಕ್ಟೇರ್ ಪ್ರದೇಶದಲ್ಲಿ ಬೇಳೆ ಕಾಳು, 11,929 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಗಳ, 50,374 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯ ಬಿತ್ತನೆಯಾಗಿದೆ. ಇದಲ್ಲದೇ 82,258 ಹೆಕ್ಟೇರ್ ಪ್ರದೇಶದಲ್ಲಿ ಹೊಗೆಸೊಪ್ಪಿನ ಹಾಗೂ 1,135 ಹೆಕ್ಟೇರ್ ಕ್ಷೇತ್ರದಲ್ಲಿ ಹೊಸ ಕಬ್ಬು ಮತ್ತು 2,458 ಹೆಕ್ಟೇರ್ ಪ್ರದೇಶದಲ್ಲಿ ಕೂಳೆ ಕಬ್ಬು ನಾಟಿ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಮುಂಗಾರು ಹಂಗಾಮಿನ ಒಟ್ಟು 2,15,335 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ, ಶೇ.50 ಪ್ರಗತಿಯಾಗಿತ್ತು ಎಂದು ವಿವರಿಸಿದ್ದಾರೆ.
ಕೃಷಿ ಚಟುವಟಿಕೆಗಳು: ಜಿಲ್ಲೆಯಲ್ಲಿ ಮುಂಗಾರು ಮಳೆಯಾದ ಪ್ರದೇಶದಲ್ಲಿ ಬತ್ತದ ಬಿತ್ತನೆಗಾಗಿ ಅಲ್ಲಲ್ಲಿ ಸಸಿಮಡಿ ಕಾರ್ಯ ಮುಂದುವರಿದಿದ್ದು, ನಾಟಿ ಕಾರ್ಯ ಆರಂಭವಾಗಿದೆ. ಹೈಬ್ರಿಡ್ ಜೋಳ ಬೆಳವಣಿಗೆ ಮತ್ತು ತೆನೆಗಳಲ್ಲಿ ಹಾಲು ತುಂಬುವ, ಎಳ್ಳು ಮತ್ತು ದ್ವಿದಳ ಧಾನ್ಯಗಳು ಹೂ ಬಿಡುವ, ಕಾಳು ಬಲಿಯುವ ಮತ್ತು ಕಟಾವು ಹಂತದಲ್ಲಿವೆ.
ಹತ್ತಿ ಬೆಳೆಯು ಬೆಳವಣಿಗೆ, ಮೊಗ್ಗು, ಹೂವು ಮತ್ತು ಕಾಯಿ ಹಂತದಲ್ಲಿದೆ. ರಾಗಿ ಸಸಿಮಡಿ, ನಾಟಿ ಮತ್ತು ಬೆಳವಣಿಗೆ, ಮುಸುಕಿನ ಜೋಳ ಬಿತ್ತನೆ, ಬೆಳವಣಿಗೆ, ಮೋತೆ ಹಂತ, ನೆಲಗಡಲೆ ಬಿತ್ತನೆ, ಬೆಳವಣಿಗೆ, ಬೀಳು ಬಿಡುವ ಹಂತದಲ್ಲಿವೆ. ಸೂರ್ಯಕಾಂತಿ ಹೂ ಬಿಡುವ, ಕಾಳು ಕಟ್ಟುವ ಮತ್ತು ಕಟಾವು, ಹರಳು ಬೆಳವಣಿಗೆ, ಹೊಗೆಸೊಪ್ಪು ಬೆಳವಣಿಗೆ, ಹೂ ಹಾಗೂ ಎಲೆ ಕೊಯ್ಯುವ ಹಂತದಲ್ಲಿ ಮತ್ತು ಕಬ್ಬು ವಿವಿಧ ಬೆಳವಣಿಗೆ ಹಂತದಲ್ಲಿದೆ.
ಜಿಲ್ಲೆಯ ಸರಾಸರಿ ವಾರ್ಷಿಕ ವಾಡಿಕೆ ಮಳೆ 801.4 ಮಿಮೀ ಇದ್ದು, ಈ ಬಾರಿ ಜು.29 ರವರೆಗೆ 394.4 ಮಿಮೀ ವಾಡಿಕೆ ಮಳೆಗೆ ಸರಾಸರಿ 429.3 ಮಿಮೀ ಮಳೆಯಾಗಿದ್ದು, ಮಳೆ ಪ್ರಮಾಣ ಶೇ.109 ಆಗಿದೆ. ಜುಲೈನಲ್ಲಿ 104.2 ಮಿಮೀ ವಾಡಿಕೆ ಮಳೆಗೆ ಸರಾಸರಿ 151.9 ಮಿಮೀ ಮಳೆಯಾಗಿದೆ. ಜಿಲ್ಲೆಯ ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲೂಕುಗಳನ್ನು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ 2012ನೇ ಸಾಲಿನಲ್ಲಿ ಜನವರಿಯಿಂದ ಜುಲೈವರೆಗೆ 394.4 ಮಿಮೀ ವಾಡಿಕೆ ಮಳೆಗೆ ಸರಾಸರಿ 197 ಮಿಮೀ ಮಾತ್ರ ಮಳೆಯಾಗಿತ್ತು.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಒಟ್ಟು 96,300 ಮೆ. ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಿದ್ದು, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮತ್ತು ಖಾಸಗಿಯವರ ಆರಂಭಿಕ ದಾಸ್ತಾನು ಸೇರಿದಂತೆ ಈವರೆಗೆ ಒಟ್ಟು 71,254 ಮೆ. ಟನ್ ರಸಗೊಬ್ಬರ ಸರಬರಾಜು ಆಗಿದೆ. 47,369 ಮೆ. ಟನ್ ರಸಗೊಬ್ಬರ ವಿತರಣೆಯಾಗಿದ್ದು, 23,885 ಮೆ. ಟನ್ ರಸಗೊಬ್ಬರ ದಾಸ್ತಾನು ಇದೆ.
17,698 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ
ಜಿಲ್ಲೆಯಲ್ಲಿ ಸದರಿ ಹಂಗಾಮಿನಲ್ಲಿ ರಿಯಾಯಿತಿ ದರದ 30,421 ಕ್ವಿಂಟಲ್ ಬಿತ್ತನೆ ಬೀಜ ವಿತರಿಸುವ ಗುರಿಯಿದೆ. ಈವರೆಗೆ ದೃಢೀಕೃತ ಹೈಬ್ರಿಡ್ ಜೋಳ ಮತ್ತು ದ್ವಿದಳ ಧಾನ್ಯ ಬೆಳೆಗಳ 29,440 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜಾಗಿದ್ದು, 17,698 ಕ್ವಿಂಟಲ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗಿದೆ. ಕೆಎಸ್‌ಎಸ್ಸಿ, ಎನ್‌ಎಸ್ಸಿ. ಮತ್ತು ಖಾಸಗಿಯವರಲ್ಲಿ ಒಟ್ಟು 19,981 ಕ್ವಿಂಟಲ್ ಬಿತ್ತನೆ ಬೀಜದ ಲಭ್ಯವಿದೆ ಎಂದು ಕೃಷ್ಣಯ್ಯ ತಿಳಿಸಿದ್ದಾರೆ.