ಮುಂದುವರಿದ ಶಾಲೆ ಉಳಿಸಿ ಧರಣಿ
ಕ.ಪ್ರ.ವಾರ್ತೆ , ಮೈಸೂರು , ಜು. 30
ಮಹಾರಾಣಿ ಎನ್‌ಟಿಎಂ ಶಾಲೆ ಉಳಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ 48 ಗಂಟೆಗಳ ಧರಣಿ ಸತ್ಯಾಗ್ರಹವು 2ನೇ ದಿನವಾದ ಮಂಗಳವಾರ ಸಹ ಮುಂದುವರಿಯಿತು.
ಎನ್‌ಟಿಎಂಎಸ್ ಬಾಲಕಿಯರ ವಸತಿ ಶಾಲೆಯಾಗಬೇಕು. ಯಾವುದೇ ಕಾರಣಕ್ಕೂ ಶಾಲೆಯ ಜಾಗವನ್ನು ರಾಮಕೃಷ್ಣ ಮಠಕ್ಕೆ ನೀಡಬಾರದು. ವಿವೇಕಾನಂದ ಸ್ಫೂರ್ತಿ ಕೇಂದ್ರ ಸ್ಥಾಪನೆಗೆ ಬೇರೆಡೆ ಜಾಗ ನೀಡಬೇಕು. ಹಿಂದಿನ ಬಿಜೆಪಿ ಸರ್ಕಾರದ ತೀರ್ಮಾನವನ್ನು ಈಗಿನ ಕಾಂಗ್ರೆಸ್ ಸರ್ಕಾರವು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಧರಣಿ ಸತ್ಯಾಗ್ರಹವು ಜು. 31ರ ಬೆಳಗ್ಗೆ 11ಕ್ಕೆ ಮುಕ್ತಾಯಗೊಳ್ಳಲಿದೆ. ಸಾಹಿತಿ ಪ್ರೊ. ಕೆ.ಎಸ್. ಭಗವಾನ್, ಕಲಾವಿದ ಬಾದಲ್ ನಂಜುಂಡಸ್ವಾಮಿ, ನಿವೃತ್ತ ಅಧಿಕಾರಿ ಎನ್. ಪುಟ್ಟನಂಜಯ್ಯ, ಪಾಲಿಕೆ ಮಾಜಿ ಸದಸ್ಯ ವಾಸುದೇವ್, ದಸಂಸ ಮುಖಂಡ ಮಲೆಯೂರು ಸೋಮಯ್ಯ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಸವರಾಜು,
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಜಗದೀಶ್ ಸೂರ್ಯ, ಜಿಲ್ಲಾ ಕಾರ್ಯದರ್ಶಿ ಮಹೇಶ್‌ಕುಮಾರ್, ಮುಖಂಡರಾದ ರಂಜಿತಾ, ಅಂಜುಶ್ರೀ, ಶಶಿಕಲಾ, ಸರಸ್ವತಿ, ರವಿಕುಮಾರ್, ಚೇತನ್ ಇದ್ದರು.