ವಿವಿಧೆಡೆ ಸಂಭ್ರಮದ ಚಾಮುಂಡಿ ಹಬ್ಬ
ಕ.ಪ್ರ.ವಾರ್ತೆ , ಮೈಸೂರು , ಜು. 30
ಆಷಾಢ ಮಾಸದ ಅಂಗವಾಗಿ ನಡೆಯುವ ಚಾಮುಂಡಿ ಹಬ್ಬವು ನಗರದಲ್ಲಿ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.
ನಗರದ ವಿವಿಧ ಬಡಾವಣೆಯಲ್ಲಿ ಚಾಮುಂಡೇಶ್ವರಿ ಭಕ್ತರು ಮತ್ತು ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಚಾಮುಂಡಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಚಾಮರಾಜ ಮೊಹಲ್ಲಾ, ರೆಹಮಾನಿ ರಸ್ತೆಯ ಕುರುಬರ ಶ್ರೀರಾಮ ಮಂದಿರದಲ್ಲಿ 19ನೇ ವರ್ಷದ ಚಾಮುಂಡೇಶ್ವರಿ ಪೂಜಾ ಮಹೋತ್ಸವ ನಡೆಯಿತು. ವಿವಿಧ ಧರ್ಮಗುರುಗಳು, ಸ್ಥಳೀಯ ಶಾಸಕರ ನೇತೃತ್ವದಲ್ಲಿ ನಡೆದ ಮಹೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ಗಾರುಡಿಗೊಂಬೆ, ಕೀಲು ಕುದುರೆ, ಪೂಜಾ ಕುಣಿತ ಮುಂತಾದ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.
ಮೆರವಣಿಗೆಯು ಗನ್ಹೌಸ್ ಮುಂದಿನ ಶಂಕರಮಠದಿಂದ ಹೊರಟು ಚಾಮರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಹಳೆಬಂಡಿಕೇರಿ ಮೂಲಕ ಅಗಸರ ಬೀದಿ, ಕುರುಬರಗೇರಿ, ಡಿ. ಸುಬ್ಬಯ್ಯ ರಸ್ತೆ, ಬೆಸ್ತಗೇರಿ, ದಿವಾನ್ಸ್ ರಸ್ತೆ, ಶಂಕರಮಠದ ರಸ್ತೆಯಿಂದ ಕುಂಬಾರಗೇರಿ 1ನೇ ಕ್ರಾಸ್ನಿಂದ 4ನೇ ಕ್ರಾಸ್, ರೆಹಮಾನಿಯ 8ನೇ ಕ್ರಾಸ್ 2ನೇ ಮುಖ್ಯರಸ್ತೆ, 7ನೇ ಕ್ರಾಸ್ ಮೂಲಕ ಸಂಚರಿಸಿತು.
ಚಾಮುಂಡಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಹಳೆಯ ಬಡಾವಣೆಗಳಾದ ಕನ್ನೇಗೌಡನಕೊಪ್ಪಲು, ಪಡುವಾರಹಳ್ಳಿ, ಕುಂಬಾರಕೊಪ್ಪಲು, ಒಂಟಿಕೊಪ್ಪಲು ಮುಂತಾದ ಕಡೆಯಲ್ಲಿ ದೇವರಿಗೆ ಬಲಿ ನೀಡಿದ ಕುರಿ ಮತ್ತು ಕೋಳಿಯ ಬಾಡೂಟದ ಘಮ ಘಮ ವ್ಯಾಪಿಸಿತ್ತು. ಮೈಸೂರಿನ ಈ ಬಡಾವಣೆಯ ಬಹುತೇಕ ಮನೆ ಮನೆಯಲ್ಲೂ ಒಂದೆ ದಿನ ಬಾಡೂಟ ಮಾಡುವುದು ಚಾಮುಂಡಿ ಹಬ್ಬದಲ್ಲಿ ಮಾತ್ರ.
ಕೆ.ಆರ್. ಮಿಲ್ ಕಾಲೋನಿಯಲ್ಲಿ ಚಾಮುಂಡೇಶ್ವರಿ ಅಮ್ಮನವರ 10ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ತಂಬಿಟ್ಟಿನ ಆರತಿ ಮತ್ತು ವಿಶೇಷ ಪೂಜೆ ಮಾಡಲಾಯಿತು. ಸಂಜೆ ಡಿಂಗ್ರಿ ನಾಗರಾಜ್ ಮತ್ತು ತಂಡದಿಂದ ಹಾಸ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಂತೆಯೆ ಹೆಬ್ಬಾಳಿನ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ದೇವಿಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಮಾಡಲಾಯಿತು.