ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವೈದ್ಯಕೀಯ ಚಿಕಿತ್ಸೆಗೆ ನೆರವಾಗಿ

Vishwanath S
Updated On : 31 Jul 2013, 12:33 pm

ಮೈಸೂರು: ಗ್ಯಾಂಗ್ರೀನ್‌ನಿಂದ ಬಳಲುತ್ತಿರುವ ತಮಗೆ ಚಿಕಿತ್ಸೆ ಪಡೆಯಲು ಧನಸಹಾಯ ಮಾಡಬೇಕು ಎಂದು ಮಂಡಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಉಮರ್ ಷರೀಫ್ ಮನವಿ ಮಾಡಿದ್ದಾರೆ. ಗ್ಯಾಂಗ್ರೀನ್ ಮತ್ತು ನರ ರೋಗದಿಂದ ನರಳುತ್ತಿರುವ ನನಗೆ ಪ್ರೌಢಶಾಲೆ ಓದುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನ್ನ ಪತ್ನಿಯೂ ಅನಾರೋಗ್ಯದಿಂದ ಬಳಳುತ್ತಿದ್ದಾರೆ. ನಾನು ತಳ್ಳುವ ಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಈಗ ಆರೋಗ್ಯ ಕೆಟ್ಟಿರುವುದರಿಂದ ವ್ಯಾಪಾರ ನಿಲ್ಲಿಸಿದ್ದೇನೆ. ದಾನಿಗಳು ಮಂಡಿ ಮೊಹಲ್ಲಾ, ಕಬೀರ್ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನನ್ನ ಉಳಿತಾಯ ಖಾತೆ ಸಂಖ್ಯೆ 64120337522ಗೆ ಧನಸಹಾಯ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮೊ. 9036349236 ಸಂಪರ್ಕಿಸಬಹುದು.

ನೌಕರರ ಸಂಘಕ್ಕೆ ಬಸವರಾಜು ಆಯ್ಕೆ
ಮೈಸೂರು: ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಬಿ. ಬಸವರಾಜು ಆಯ್ಕೆಯಾಗಿದ್ದಾರೆ.

ಆ. 4ರಂದು ಗ್ರಾಪಂ ಉಪ ಚುನಾವಣೆ
ಮೈಸೂರು: ಜಿಲ್ಲೆಯ 11 ಗ್ರಾಪಂಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಆ. 4ರಂದು ಉಪ ಚುನಾವಣೆ ನಡೆಯಲಿದೆ. ಮೈಸೂರು ತಾಲೂಕಿನ ಸಜ್ಜೇಹುಂಡಿ, ಧನಗಳ್ಳಿ, ಟಿ. ನರಸೀಪುರದ ಯಡಹಳ್ಳಿ, ಕಾಳಿಹುಂಡಿ, ನಂಜನಗೂಡಿನ ಇಮ್ಮಾವುಹುಂಡಿ, ಸಿದ್ದಯ್ಯನಹುಂಡಿ, ಹುಣಸೂರಿನ ಉದ್ಬೂರು, ಎಚ್.ಡಿ. ಕೋಟೆಯ ಹಂಪಾಪುರ, ಎಂ.ಸಿ.ತಳಲು, ಹಾದನೂರು ಗ್ರಾಪಂ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಅಂದು ನಡೆಯುವ ಜಾತ್ರೆ, ಸಂತೆ, ಉತ್ಸವ ರದ್ದು ಮಾಡಲಾಗಿದೆ. ಆ. 2ರ ಮಧ್ಯರಾತ್ರಿಯಿಂದ ಆ.4ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಡಿಸಿ ಸಿ. ಶಿಖಾ ತಿಳಿಸಿದ್ದಾರೆ.

ಬಾಳೆ ಬೆಳೆ ರೋಗ ನಿಯಂತ್ರಣಕ್ಕೆ ಸಲಹೆ
ಮೈಸೂರು: ಜಿಲ್ಲೆಯಲ್ಲಿ ಜು. 31 ರಿಂದ ಆ. 2 ರವರೆಗೆ ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಅಲ್ಲಲ್ಲಿ ತುಂತುರು ಅಥವಾ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ತಿಳಿಸಿದ್ದಾರೆ. ರೈತರು ಬಾಳೆ ನಾಟಿಗಾಗಿ ಉಪಯೋಗಿಸುವ ಕಂದುಗಳು ಗಡ್ಡೆ ಕೊರೆಯುವ ಹುಳು, ಮೊಸಾಯಿಕ್ ನಂಜುರೋಗ ಮತ್ತು ಜಂತುಗಳಿಂದ ಮುಕ್ತವಾಗಿರಬೇಕು. ಮೆಣಸಿನಕಾಯಿ ಗಿಡಕ್ಕೆ ಥಿಪ್ಸ್ ಮತ್ತು ನುಸಿ ಕಾಣಿಸಿಕೊಂಡಿದ್ದಲ್ಲಿ ಇದರ ಹತೋಟಿಗೆ ರೋಗರ್ 1.7 ಮಿಲೀ ಮತ್ತು ಡೈಕೋಪಾಲ್ 2.5 ಮಿಲೀ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ತೆಂಗು ಬೆಳೆಗ ಕಾಂಡ ಸೋರುವ ರೋಗ ತಗುಲಿದ್ದರೆ ರೋಗದ ಬಾಧೆಯಿರುವ ಜಾಗವನ್ನು ಹರಿತವಾದ ಬಾಚಿಯಿಂದ ಕೆತ್ತಿ ಶೇ. 1ರ ಬೋರ್ಡೋ ಮುಲಾಮು ಲೇಪಿಸುವಂತೆ ಸಲಹೆ ನೀಡಿದ್ದಾರೆ.

ಬಿ.ಎಂ. ರಾಮುಗೆ ಟಿಕೆಟ್ ನೀಡಿ
ಟಿ. ನರಸೀಪುರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಉಪ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಲು ಪಕ್ಷದ ಜಿಲ್ಲಾಧ್ಯಕ್ಷ ಬಿ.ಎಂ. ರಾಮು ಅವರಿಗೆ ಟಿಕೆಟ್ ನೀಡಬೇಕು ಎಂದು ಕೆಜೆಪಿ ಜಿಲ್ಲಾ ವಕ್ತಾರ ಬಿ. ವೀರಭದ್ರಪ್ಪ ಹೇಳಿದರು. ಮೈಸೂರು ಮತ್ತು ಚಾ.ನಗರ ಜಿಲ್ಲೆಗಳಲ್ಲಿ ಕೆಜೆಪಿ ಸಂಘಟನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಬಿ.ಎಂ. ರಾಮು ಅವರು ಹಿಂ.ವರ್ಗಗಳ ಮುಖಂಡರಾಗಿದ್ದಾರೆ. ಜಿಪಂ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಅವರು ವಿಧಾನ ಪರಿಷತ್‌ಗೆ ಆಯ್ಕೆಯಾದರೆ ಕೆಜೆಪಿ ಸಂಘಟನೆಯನ್ನು ಬಲವಾಗಿ ಕಟ್ಟಲಿದ್ದಾರೆ. ಆದ್ದರಿಂದ ಅವರಿಗೆ ಟಿಕೆಟ್ ನೀಡಬೇಕು ಎಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಒತ್ತಾಯಿಸಿದರು.

ಟಿಕೆಟ್ ನೀಡಲು ಆಗ್ರಹ
ಭೇರ್ಯ: ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಈ ಬಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಸೇನ ಅವರಿಗೆ ಟಿಕೆಟ್ ನೀಡಬೇಕು ಎಂದು ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್. ರಾಜಶೇಖರ್ ಒತ್ತಾಯಿಸಿದ್ದಾರೆ. ಧರ್ಮಸೇನ ಅವರು ಹಲವಾರು ವರ್ಷಗಳಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಅವರಿಗೆ ವಿಧಾನಪರಿಷತ್ ಉಪ ಚುನಾವಣೆಗೆ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಪಕ್ಷದ ವರಿಷ್ಠರನ್ನು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಜಯಕೀರ್ತಿ, ಮಹದೇವು, ಕಾಳೇಗೌಡ, ಮುಂಜನಹಳ್ಳಿ ವೆಂಕಟೇಶ್ ಇದ್ದರು.

ಸಂತೆ ಜಾಗ ಬದಲು
ಎಚ್.ಡಿ. ಕೋಟೆ: ಪಟ್ಟಣದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಪಪಂ ಕಚೇರಿ ಎದುರು ನಡೆಯುತ್ತಿದ್ದ ಸಂತೆ ಸ್ಥಳವನ್ನು ತಹಸೀಲ್ದಾರ್ ಬದಲಿಸಿದ್ದಾರೆ. ಮಳೆಯಿಂದಾಗಿ ಸಂತೆ ನಡೆಸಲು ಮತ್ತು ಸಾರ್ವಜನಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಹುಣಸೂರು-ಬೇಗೂರು ರಸ್ತೆಯ ಅಂಬೇಡ್ಕರ್ ಭವನದ ಹಿಂಭಾಗದ ಲೋಕೋಪಯೋಗಿ ಇಲಾಖೆ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ವಾಹನ ಡಿಕ್ಕಿ: ವ್ಯಕ್ತಿ ಸಾವು
ಎಚ್.ಡಿ. ಕೋಟೆ: ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾನಮತ್ತ ವ್ಯಕ್ತಿ ಮೃತಪಟ್ಟ ಘಟನೆ ಮೈಸೂರು- ಮಾನಂದವಾಡಿ ರಸ್ತೆಯ ಮಾದಾಪುರ ಸಮೀಪ ನಡೆದಿದೆ. ತಾಲೂಕು ಹೈರಿಗೆ ಗ್ರಾಮದ ಮಾಲಿಂಗಯ್ಯ ಎಂಬವರ ಮಗ ಮಹದೇವಮೂರ್ತಿ (28) ಮೃತಪಟ್ಟವರು. ಪಾನಮತ್ತನಾಗಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಸೋಮವಾರ ರಾತ್ರಿ ವಾಹನ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಅವರು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಂತೃಸ್ತರಿಗೆ ವಿದ್ಯಾರ್ಥಿಗಳ ದೇಣಿಗೆ
ಹುಣಸೂರು: ಉತ್ತರಾಖಂಡನ ನೆರೆ ಸಂತ್ರಸ್ತರಿಗೆ ನೈತಿಕ ಸ್ಥೈರ್ಯ ತುಂಬಲು ಪಟ್ಟಣದ ರೋಟರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದರು. ಶಾಲಾ ಆವರಣದಲ್ಲಿ ಗುರುವಾರ ದೇಣಿ ಪೆಟ್ಟಿಗೆಗೆ ತಮ್ಮ ಕೈಲಾದಷ್ಟು ಹಣ ಹಾಕುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ವೇಳೆ ಮಾತನಾಡಿದ ರೋಟರಿ ವಿದ್ಯಾಸಂಸ್ಥೆ ಪ್ರಾಂಶುಪಾಲ ರೇಣುಕಾ ಪ್ರಸಾದ್, ಉತ್ತರಾಖಂಡನ ಅತಿವೃಷ್ಟಿಯಿಂದಾದ ಅನಾಹುತ ನಮ್ಮೆಲ್ಲರ ಕಣ್ಣ ಮುಂದಿದೆ. ಅನಾಹುತದಿಂದ ಮನೆ ಹಾಗೂ ಬಂಧುಗಳನ್ನು ಕಳೆದುಕೊಂಡ ಕುಟುಂಬಕ್ಕೆ ಧೈರ್ಯ ತುಂಬಬೇಕಿದೆ. ಶಾಲೆಯ ವಿದ್ಯಾರ್ಥಿಗಳು ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರಾಜಶೇಖರ್, ರೋಟರಿ ಶಾಲಾ ಸಮಿತಿ ಅಧ್ಯಕ್ಷ ಆರ್. ಆನಂದ್, ಸದಸ್ಯರಾದ ಶಿವಕುಮಾರ್ ಹಾಗೂ ಶಿಕ್ಷಕರು ಇದ್ದರು.

ಗುರು- ಶಿಷ್ಯರ ಸ್ನೇಹಪೂರ್ವಕ ಕ್ರಿಕೆಟ್
ಮೈಸೂರು: ನಗರದ ಶಾರದಾ ವಿಲಾಸ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಟಾಸ್ ಗೆದ್ದ ವಿದ್ಯಾರ್ಥಿಗಳ ತಂಡದ ನಾಯಕ ಸಂತೋಷ್ ಫೀಲ್ಡಿಂಗ್ ಆರಿಸಿಕೊಂಡರು. ಅಧ್ಯಾಪಕರ ತಂಡದ ಬ್ರಿಜೇಶ್ ಪಟೇಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 33 ಬಾಲ್‌ಗಳಲ್ಲಿ 48 ರನ್ ಗಳಿಸಿದರು. 10 ಓವರ್‌ಗಳಲ್ಲಿ ಅಧ್ಯಾಪಕರ ತಂಡ 8 ವಿಕೆಟ್ ನಷ್ಟಕ್ಕೆ 64 ರನ್ ಪೇರಿಸಿದರು. ಗೆಲವು ಸಾಧಿಸಲು ಬೇಕಾಗಿದ್ದ 65 ರನ್‌ಗಳ ಗುರಿಯನ್ನು ಮುಟ್ಟಲು ವಿದ್ಯಾರ್ಥಿಗಳ ತಂಡ ರಭಸದಿಂದ ಬ್ಯಾಟಿಂಗ್ ಪ್ರದರ್ಶಿಸಿತು. ಎಂಟನೆ ಓವರ್‌ನಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿ ಏಳು ವಿಕೆಟ್‌ಗಳ ಜಯ ಸಾಧಿಸಿತು. ಅಧ್ಯಾಪಕರ ತಂಡದ ಬ್ರಿಜೇಶ್ ಪಟೇಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಆ. 3ರಿಂದ ಸಂಗೀತೋತ್ಸವ
ಮೈಸೂರು: ಮೈಸೂರಿನ ಸುಷಿರ ವಿ ದೇಶಿಕಾಚಾರ್ಸ್ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ 13ನೇ ವಾರ್ಷಿಕೋತ್ಸವ ಅಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆ. 3, 4 ಮತ್ತು 5 ರಂದು ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಿದೆ. ಜು. 3ರ ಸಂಜೆ 6ಕ್ಕೆ ವಿದ್ವಾನ್ ಆರ್.ಕೆ. ಪದ್ಮನಾಭ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಇದೆ. ವಿದ್ವಾನ್ ಸಿ.ಎನ್. ಚಂದ್ರಶೇಖರ್ ಪಿಟೀಲು, ಸಿ. ಚೆಲುವರಾಜು ಅವರ ಮೃದಂಗ ಮತ್ತು ಬಿ.ಎನ್. ಚಂದ್ರಮೌಳಿ ಅವರು ಖಂಜಿರ ಸಹಕಾರ ನೀಡುವರು. ಜು. 4ರ ಸಂಜೆ 6ಕ್ಕೆ ವಿದ್ವಾನ್ ಮೈಸೂರು ವಿ. ವಂಶೀಧರ್ ಅವರ ಕೊಳಲು ವಾದನ ಇದೆ. ಇವರಿಗೆ ಮೈಸೂರು ಎಂ. ನಾಗರಾಜ್ ಅವರು ಪಿಟೀಲು, ಕೆ.ಯು. ಜಯಚಂದ್ರ ರಾವ್ ಮೃದಂಗ ಮತ್ತು ಜಿ. ಗುರುಪ್ರಸನ್ನ ಅವರು ಖಂಜಿರ ಸಹಕಾರ ನೀಡುವರು. ಜು. 5ರ ಸಂಜೆ 6ಕ್ಕೆ ವಿದುಷಿ ಗೀತಾ ರಮಾನಂದ್ ಮತ್ತು ರೇವತಿಮೂರ್ತಿ ಅವರ ದ್ವಂದ್ವ ವೀಣಾವಾದನ ಇದೆ. ಇವರಿಗೆ ಜಿ.ಎಸ್. ರಾಮಾನುಜನ್ ಮೃದಂಗ ಮತ್ತು ವಿ.ಎಸ್. ರಮೇಶ್ ಘಟಂ ಸಹಕಾರ ನೀಡುವರು.

ಇಂದು ಪ್ರತಿಭಟನೆ
ಮೈಸೂರು: ಹಾಸ್ಟೆಲ್ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ ಏರಿಕೆ ಖಂಡಿಸಿ ಬಹುಜನ ವಿದ್ಯಾರ್ಥಿ ಸಂಘ ಜು. 31ರ ಬೆಳಗ್ಗೆ 11.30ಕ್ಕೆ ಮೈಸೂರು ವಿವಿ ಕ್ರಾಫರ್ಡ್ ಭವನದ ಮುಂದೆ ಪ್ರತಿಭಟಿಸಲಿದೆ ಎಂದು ಜಿಲ್ಲಾ ಸಂಯೋಜಕ ಸೋಸಲೆ ಸಿದ್ದರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement