ಸಮರ್ಪಕ ನೈರ್ಮಲ್ಯ ನಿರ್ವಹಣೆ: ಪದ್ಮಾ ವೆಂಕಟೇಶ್
ಕ.ಪ್ರ.ವಾರ್ತೆ , ಟಿ.ನರಸೀಪುರ , ಜು. 30
ಭೈರಾಪುರ ಗ್ರಾಪಂ ವ್ಯಾಪ್ತಿಯ ಪಟ್ಟಣದ ಪ್ರದೇಶದಲ್ಲಿ ಸಮರ್ಪಕವಾಗಿ ಸ್ವಚ್ಛತೆ ನಿರ್ವಹಿಸಿ, ನೈರ್ಮಲ್ಯ ಕಾಪಾಡಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷೆ ಪದ್ಮಾ ವೆಂಕಟೇಶ್ ಹೇಳಿದರು.
ತಾಲೂಕಿನಲ್ಲಿಯೇ ಪಟ್ಟಣವನ್ನು ಹೊಂದಿರುವ ದೊಡ್ಡ ಗ್ರಾಪಂ ನಮ್ಮದಾಗಿದ್ದು, ನಿರ್ವಹಣೆಗೆ ಅಗತ್ಯವಿರುವ ಅನುದಾನದ ಕೊರತೆ ಇದ್ದರೂ ಸಾಧ್ಯವಾದಷ್ಟು ಸ್ವಚ್ಛತೆ ಮಾಡಲಾಗುತ್ತಿದೆ ಎಂದು ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರಕ್ಕೆ ಸೇರುವ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಬೇಕು.
ಪಂಚಾಯಿತಿ ವ್ಯಾಪ್ತಿಯ ಪಟ್ಟಣ ಪ್ರದೇಶಗಳ ಸಮಗ್ರ ಪ್ರಗತಿಗೆ ಪೂರಕವಾದ ವಿಶೇಷ ಯೋಜನೆ ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಸದಸ್ಯ ಬಿ.ಎಲ್. ಮಹದೇವ ಮಾತನಾಡಿ, ಗ್ರಾಪಂಗೆ ಅನುಭವಿ ಪಿಡಿಒ, ಕಾರ್ಯದರ್ಶಿಯನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ. ವೀರಭದ್ರಪ್ಪ, ಸದಸ್ಯರಾದ ಪ್ರಕಾಶ್, ಬಿ.ಎಂ. ದೀವಾಕರ, ಕಮಲಮ್ಮ, ಭಾಗ್ಯಮ್ಮ, ಶಿವಮ್ಮ, ಕೆ. ಲೀಲಾ ಇದ್ದರು.