ಸಿಂಧುವಳ್ಳಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ
ಮೈಸೂರು: ಹೆಣ ಸುಟ್ಟು ಹಣ ಹಂಚಿಕೊಳ್ಳುವ ವಿಚಾರದಲ್ಲಿ ಜಗಳವಾಡಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಅಪರಾಧಿಗೆ ಮೈಸೂರಿನ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಂಜನಗೂಡು ತಾಲೂಕು ಸಿಂಧುವಳ್ಳಿ ನಿವಾಸಿ ಒಬ್ಬ ಬಸವನಾಯಕ ಶಿಕ್ಷೆಗೆ ಗುರಿಯಾದವನು. ಈತನು ಇನ್ನೊಬ್ಬ ಬಸವನಾಯಕ ಎಂಬಾತನನ್ನು ಕೊಲೆ ಮಾಡಿದ್ದ.
2011ರ ನ. 10ರಂದು ಸಿದ್ದನಾಯಕ ಅ. ಪಟೇಲನಾಯಕ ಎಂಬವರು ಮೃತಪಟ್ಟಿದ್ದು, ಇವರ ಹೆಣವನ್ನು ಧಪನ್ ಮಾಡುವ ಕಾರ್ಯವನ್ನು ಒಬ್ಬ ಬಸವನಾಯಕ ಮತ್ತು ಇನ್ನೊಬ್ಬ ಬಸವನಾಯಕಗೆ ಮೃತರ ಕುಟುಂಬದವರು ಒಪ್ಪಿಸಿದ್ದರು. ಹೆಣ ಸಂಪೂರ್ಣ ಸುಟ್ಟ ನಂತರ ಬರುವಂತೆ ಈ ಇಬ್ಬರಿಗೆ 300 ನೀಡಿ ಹೋಗಿದ್ದಾರೆ. ಈ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರು ಬಸವನಾಯಕ ಗಲಾಟೆ ಮಾಡಿಕೊಂಡಿದ್ದಾರೆ.
ಬಸವನಾಯಕ ಮತ್ತೊಬ್ಬ ಬಸವನಾಯಕನಿಗೆ ಬೆಂಕಿ ಉರಿಯುತ್ತಿದ್ದ ಬಿದಿರು ಬೊಂಬು ಹೊಡೆದು ಮತ್ತು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ಅವರು, ಬಸವನಾಯಕ ಮೇಲಿನ ಆರೋಪ ಸಾಬೀತಾಗಿದೆ ಎಂದು ನಿರ್ಣಯಿಸಿ, ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎ.ಎ. ಪಾರಶೆಟ್ಟಿ ವಾದಿಸಿದ್ದರು.