ಹುಲ್ಲಹಳ್ಳಿ ನಾಲೆ ಹೂಳು ತೆಗೆಸಲು ಚಾಲನೆ
ಕ.ಪ್ರ.ವಾರ್ತೆ , ಸುತ್ತೂರು , ಜು. 30
ಹುಲ್ಲಹಳ್ಳಿ ನಾಲೆಯಲ್ಲಿ ಹೂಳು ತೆಗೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕಬಿನಿ ಜಲಾಶಯದಿಂದ ನಾಲೆಗೆ ಹರಿಸಿದ ನೀರು ಕೊನೆಯ ಭಾಗಕ್ಕೆ ತಲುಪಿಸಲು ಅಧಿಕಾರಿಗಳು ಸಾಹಸಪಡುತ್ತಿದ್ದಾರೆ. ಕೆಲ ದಿನಗಳಿಂದ ಸುತ್ತೂರು, ಬಿಳುಗಲಿ ಗ್ರಾಮದ ರೈತರು ಕಾಡಾ ಕಚೇರಿಗೆ ಮುತ್ತಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಲುವೆಯಲ್ಲಿ ಹೂಳು ತುಂಬಿದ್ದು, ಗಿಡಗಂಟಿಗಳು ಯಥೇಚ್ಛವಾಗಿ ಬೆಳೆದು ನಿಂತಿದೆ. ಇದರಿಂದ ನಮ್ಮ ಜಮೀನಿಗೆ ನೀರು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ರೈತರ ಒತ್ತಾಯಕ್ಕೆ ಸ್ಪಂದಿಸಿದ್ದ ಕಬಿನಿ ಜಲಾಶಯ ವಿಭಾಗದ ಅಧೀಕ್ಷಕ ಎಂಜಿನಿಯರ್ ಶಿವಮೂರ್ತಿ, ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಕುಮಾರ್ ಹೂಳು ತೆಗೆಸಿ ನೀರು ತಲುಪಿಸುವುದಾಗಿ ಭರವಸೆ ನೀಡಿದ್ದನ್ನು ಕನ್ನಡಪ್ರಭ ಪ್ರಕಟಿಸಿತ್ತು.