ಕಾನೂನು ಉಸಿರಿನಷ್ಟೆ ಮುಖ್ಯ
ಕ.ಪ್ರ.ವಾರ್ತೆ , ಹುಣಸೂರು , ಜು. 31
ಕಾನೂನು ಇರುವುದು ಪ್ರತಿಯೊಬ್ಬರ ರಕ್ಷಣೆಗಾಗಿ, ಹಕ್ಕುಗಳ ಬಗ್ಗೆ ಅರಿವಿದ್ದರೆ, ಶೋಷಣೆಗಳ ವಿರುದ್ಧ ಪ್ರತಿಭಟಿಸಿ ನ್ಯಾಯ ದೊರಕಿಸಿಕೊಳ್ಳಬಹುದು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಬಿ.ಎಂ. ಶೈಲಾ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ ಅಭಿಯೋಜಕ ಇಲಾಖೆ, ವಕೀಲರ ಸಂಘ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಕಣ್ಣಿಗೆ ಗಾಳಿ ಕಾಣುವುದಿಲ್ಲ. ಆದರೆ, ಗಾಳಿ ಇಲ್ಲವಾದರೆ ಬದುಕಲು ಕಷ್ಟ. ಹಾಗೆ ಕಾನೂನು ಸಹ ಅಷ್ಟೆ ಅಗತ್ಯವಿದೆ ಎಂದರು.
ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮತ್ತು ವಾರ್ಷಿಕ ಆದಾಯ 50 ಸಾವಿರವರೆಗಿನ ಎಲ್ಲಾ ಜನಾಂಗದವರಿಗೆ ಉಚಿತ ಕಾನೂನು ನೆರವು ನೀಡಲಾಗತ್ತದೆ. ನೊಂದವರು ಬಳಸಿಕೊಳ್ಳಬೇಕೆಂದರು.
ಸಿವಿಲ್ ನ್ಯಾಯಧೀಶ ಸಿ. ವೀರಭದ್ರಯ್ಯ, ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್, ರೋಟರಿ ಶಾಲಾ ಸಮಿತಿ ಅಧ್ಯಕ್ಷ ಆರ್. ಆನಂದ್, ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ವಕೀಲರಾದ ಕೆ. ರಾಜ, ಎನ್. ನಾಗೇಂದ್ರ ಉಪನ್ಯಾಸ ನೀಡಿದರು. ಸರ್ಕಾರಿ ಅಭಿಯೋಜಕಿ ಮಂಜುಳ, ವಕೀಲರ ಸಂಘದ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಪುರಸಭಾ ಸದಸ್ಯೆ ಸುನೀತಾ ಜೈರಾಮೇಗೌಡ, ರೋಟರಿ ಸದಸ್ಯರಾದ ಸ್ವಾಮಿಗೌಡ, ಎಚ್.ಎಸ್. ಸಚ್ಚಿತ್, ಶಿವಕುಮಾರ್, ಅನಂತರಾಜೆ ಅರಸ್, ನಾಗೇಂದ್ರಗುಪ್ತ ಇದ್ದರು.