ಜಸ್ಕೋ ಸೇವೆ ರದ್ದತಿಗೆ ಜನಾಂದೋಲನ ಸಂಸ್ಥೆ ಆಗ್ರಹ
ಕ.ಪ್ರ.ವಾರ್ತೆ , ಮೈಸೂರು , ಜು. 31
ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಜಸ್ಕೋ ಕಂಪನಿ ಸೇವೆ ರದ್ದುಪಡಿಸಬೇಕು ಎಂದು ನೀರಿನ ಹಕ್ಕಿಗಾಗಿ ಜನಾಂದೋಲನ- ಕರ್ನಾಟಕ ಸಂಸ್ಥೆಯ ಎಂ. ಬಸವರಾಜು ಒತ್ತಾಯಿಸಿದ್ದಾರೆ.
ನಗರಕ್ಕೆ 24 ತಾಸುಗಳ ಕಾಲ ಕುಡಿಯುವ ನೀರು ಪೂರೈಸುವುದಾಗಿ ಹೇಳಿಕೊಂಡ ಜಸ್ಕೋ ಕಂಪನಿಯು ಜನರಿಗೆ ಮಾರಕವಾಗಿ ಪರಿಣಮಿಸಿದೆ. ಕೂಡಲೆ ಆ ಸಂಸ್ಥೆಯ ಸೇವೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್ ಅವರ ನೇತೃತ್ವದಲ್ಲಿ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಹಿಂದಿನ ಜಿಲ್ಲಾಧಿಕಾರಿ ಡಾ. ರಾಮೇಗೌಡ ಅವರು ಸಭೆ ನಡೆಸಿ ಜಸ್ಕೋ ಕಂಪನಿ ಜೊತೆಗಿನ ಒಪ್ಪಂದ ರದ್ದುಗೊಳಿಸುವುದಾಗಿ ತಿಳಿಸಿದ್ದರು. ಅಂತೆಯೆ ಇಇ ಸುಬ್ಬೇಗೌಡ ಅವರು, ಜಸ್ಕೋ ತನ್ನ ಕಾರ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ನಗರ ನೀರು ನಿರ್ವಹಣೆಗೆ ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರ ಸಮರ್ಥವಾಗಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜಸ್ಕೋ ಒಪ್ಪಂದ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ನಗರದ ಅರಮನೆಯಲ್ಲಿ ವಿದೇಶಿಯರನ್ನು ಸುಲಿಗೆ ಮಾಡಲಾಗುತ್ತಿದೆ. ಆಡಿಯೋ ಗೈಡ್ ಸೇವೆ ನೀಡುವುದಾಗಿ 100 ಪ್ರವೇಶ ಶುಲ್ಕ ಪಡೆದರೂ, ಆಡಿಯೋ ಗೈಡ್ ನೀಡುವುದಿಲ್ಲ. ಅಲ್ಲದೆ, ಆಡಿಯೋ ಗೈಡ್ ಸೇರಿಸಿ 100 ಶುಲ್ಕ ವಸೂಲಿ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. 100ರಲ್ಲಿ ಆಡಿಯೋಗೈಡ್ ಗುತ್ತಿಗೆದಾರರಿಗೆ 80 ಮತ್ತು ಸ್ಥಳ, ವಿದ್ಯುತ್ ಪೂರೈಸುವ ಅರಮನೆಗೆ ಕೇವಲ 20 ಸಂದಾಯವಾಗುತ್ತಿದೆ. ಈ ವ್ಯವಸ್ಥಿತ ಪಿತೂರಿಯ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಕೈಜೋಡಿಸಿರುವ ಶಂಕೆ ಇದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಕೆ.ಆರ್. ಬ್ಲಾಕ್ ಅಧ್ಯಕ್ಷರೂ ಆದ ಎಂ. ಬಸವರಾಜು ಒತ್ತಾಯಿಸಿದ್ದಾರೆ.