ಪಾಲಿಕೆ ಮಾಜಿ ಸದಸ್ಯ ಸೇರಿ ನಾಲ್ವರ ಬಂಧನ
ಮೈಸೂರು: ಅಕ್ರಮವಾಗಿ ಪಡಿತರ ಸೀಮೆಎಣ್ಣೆ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ನಗರಪಾಲಿಕೆ ಮಾಜಿ ಸದಸ್ಯ ಖಮುದ್ರೀನ್ ಸೇರಿದಂತೆ ನಾಲ್ವರನ್ನು ಜಯಪುರ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಖಮ್ರುದ್ದೀನ್, ಜಬ್ಬರ್, ಚೆನ್ನುಮುಲ್ಲಸ್ವಾಮಿ ಮತ್ತು ಜಬೀರ್ ಬಂಧಿತ ಆರೋಪಿಗಳು. ಮೈಸೂರು ತಾಲೂಕು ಕೋಟೆಹುಂಡಿಯಲ್ಲಿರುವ ತೋಟದ ಮನೆಯಲ್ಲಿ ಖಮ್ರುದ್ದೀನ್ ಅಕ್ರಮವಾಗಿ ಸೀಮೆಎಣ್ಣೆ ಸಂಗ್ರಹಿಸಿಟ್ಟುರುವ ಬಗ್ಗೆ ಆಹಾರ ನಿರೀಕ್ಷಕ ಪ್ರಭುಲಿಂಗಸ್ವಾಮಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ, 2.50 ಲಕ್ಷ ಮೌಲ್ಯದ 38 ಬ್ಯಾರೆಲ್ (7,300 ಲೀ.) ಸೀಮೆಎಣ್ಣೆ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸರ್ಕಲ್ ಇನ್ಸ್ಪೆಕ್ಟರ್ ನೇಮಿರಾಜು, ಜಯಪುರ ಠಾಣೆ ಎಸ್ಐ ಎಂ. ನಂಜಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.