ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ
ಮೈಸೂರು: ರಾಜ್ಯದಲ್ಲಿ ವಿಪತ್ತು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸ್ಥಾಪಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಷ್ಟ್ರೀಯ ಸಲಹೆಗಾರ ಬ್ರಿಗೇಡಿಯರ್ ಡಾ. ಬಿ.ಕೆ. ಖನ್ನಾ ಹೇಳಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದಕ್ಕಾಗಿ ರಾಜ್ಯ ಸರ್ಕಾರವು ಈಗಾಗಲೇ ಯಲಹಂಕ ಬಳಿ 2 ಎಕರೆ ಜಮೀನು ನೀಡಿದ್ದು, ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು 3.50 ಕೋಟಿ ಅನುದಾನ ನೀಡಿದೆ ಎಂದರು.
ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕವು ಆಂಧ್ರಪ್ರದೇಶದ ಗುಂಟೂರಿನಲ್ಲಿ ಒಂದು ಬೆಟಾಲಿಯನ್ ಇದೆ. 1 ಬೆಟಾಲಿಯನ್ನಲ್ಲಿ 18 ತಂಡಗಳು ಇರುತ್ತವೆ. ಪ್ರತಿ ತಂಡದಲ್ಲಿ 45 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಧ್ರ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿ ವಿಪತ್ತು ನಿರ್ವಹಣೆ ಜವಾಬ್ದಾರಿಯನ್ನು ಈ ಘಟಕಕ್ಕೆ ವಹಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಯಲಹಂಕದಲ್ಲಿ ಒಂದು ಘಟಕ ಶಾಶ್ವತವಾಗಿ ಸ್ಥಾಪಿಸಲಾಗುವುದು. ಈ ಘಟಕದಲ್ಲಿರುವ ತಂಡಗಳು ರಾಜ್ಯಾದ್ಯಂತ ವಿಪತ್ತು ನಿರ್ವಹಣೆ ಜವಾಬ್ದಾರಿಯನ್ನು ನಿಭಾಯಿಸಲಿವೆ. ಕ್ಲಿಷ್ಟಕರ ಪರಿಸ್ಥಿತಿಯನ್ನೂ ಸಮರ್ರ್ಥವಾಗಿ ನಿಭಾಯಿಸುವ ತರಬೇತಿ ತಂಡದವರಿಗೆ ನೀಡಲಾಗುತ್ತದೆ. ಈವರೆಗೆ ದೇಶಾದ್ಯಂತ 500ಕ್ಕೂ ಹೆಚ್ಚಿನ ಕಡೆಗಳಲ್ಲಿ ಅಣಕು ಪ್ರದರ್ಶನ ನೀಡಲಾಗಿದೆ. ಈಗಾಗಲೇ ಕರ್ನಾಟಕದ ಬೆಂಗಳೂರು, ಮಂಗಳೂರು, ಕಾರವಾರ, ಬಳ್ಳಾರಿ, ಕಾರವಾರ, ಮೈಸೂರು ಸೇರಿದಂತೆ 10 ಕಡೆಗಳಲ್ಲಿ ಅಣಕು ಪ್ರದರ್ಶನ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಸಿ. ಶಿಖಾ, ಕಂದಾಯ ಇಲಾಖೆ ತುರ್ತು ಘಟಕದ ಸಂಯೋಜಕ ಪ್ರದೀಪ್, ಡಿಸಿಪಿ ರಾಜಣ್ಣ, ವಿಪತ್ತು ನಿರ್ವಹಣ ತಂಡದ ಸಂಜಯ್ ಮುಖರ್ಜಿ ಇದ್ದರು.