ಭೇರ್ಯ ಹಾಲು ಉತ್ಪಾದಕರ ಸಂಘಕ್ಕೆ ಭಾರಿ ಲಾಭ
ಕ.ಪ್ರ.ವಾರ್ತೆ , ಭೇರ್ಯ , ಜು. 31
ಭೇರ್ಯ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘ 2012- 13ನೇ ಸಾಲಿನಲ್ಲಿ 60 ಲಕ್ಷ ವಹಿವಾಟು ನಡೆಸಿ 6.70 ಲಕ್ಷ ಲಾಭ ಗಳಿಸಿದೆ ಎಂದು ಮೈಮುಲ್ನ ಉಪ ವ್ಯವಸ್ಥಾಪಕ ಡಾ. ಸಣ್ಣತಮ್ಮೇಗೌಡ ಹೇಳಿದರು.
ಬುಧವಾರ ನಡೆದ ಹಾಲು ಉತ್ಪಾದಕ ಸಹಕಾರ ಸಂಘ ಸರ್ವ ಸದಸ್ಯರ ಮಹಾಸಭೆಯನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಹಾಲಿನ ಗುಣಮಟ್ಟ ಕಾಪಾಡಲು ಅಲ್ಲಲ್ಲಿ ಹಾಲು ಶೀಥಿಲೀಕರಣ ಘಟಕ ಸ್ಥಾಪಿಸಲಾಗಿದೆ. ಅವಶ್ಯಕತೆ ಇರುವ ಕಡೆಗಳಲ್ಲಿ ಭೇರ್ಯ ಸೇರಿದಂತೆ ಹಾಲು ಶೀಥಿಲೀಕರಣ ಘಟಕ ಸ್ಥಾಪಿಸಲಾಗಿದ್ದು, ಹಾಲಿನ ಗುಣಮಟ್ಟ ಚೆನ್ನಾಗಿದೆ ಎಂದರು.
ರಾಜ್ಯದ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗದ ಅಧೀನದಲ್ಲಿ ನಡೆಯುತ್ತದೆ ಎಂದ ಅವರು, ಅಗಸ್ಟ್ನಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಉತ್ಪಾದಕರ ಸಹಕಾರ ಸಂಘದಲಿದ್ದ 9 ನಿರ್ದೇಶಕರ ಬದಲಾಗಿ ಇನ್ನು ಮುಂದೆ 11 ನಿರ್ದೇಶಕರನ್ನು ಆಯ್ಕೆ ಮಾಡಬೇಕು. ಆದ್ದರಿಂದ ಇಂದೇ ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನವಾಗಬೇಕು ಎಂದು ಸದಸ್ಯರಿಂದ ಒಪ್ಪಿಗೆ ಪಡೆದರು.
ಯಶಸ್ವಿನಿ ಯೋಜನೆಗೆ 210 ನೀಡಬೇಕಾಗಿದ್ದು, ಅದರಲ್ಲಿ ಮೈಮುಲ್ನಿಂದ ಸದಸ್ಯರಿಗೆ 60 ನೀಡಲಾಗುತ್ತದೆ. ಉಳಿದ ಹಣವನ್ನು ಶಾಸಕರು ನೀಡುತ್ತಿದ್ದರು. ಆದರೆ, ಈ ಬಾರಿ ಕೊಡುತ್ತಾರೊ ಇಲ್ಲವೋ ತಿಳಿಯದಾಗಿದೆ. ರಾಸುಗಳಲ್ಲಿ ಅತಿಯಾಗಿ ಹುಳುಗಳು ಉತ್ಪತ್ತಿಯಾಗಿ ಹಾಲಿನ ಗುಣಮಟ್ಟ ಕಡಿಮೆಯಾಗುತ್ತದೆ. ರಾಸುಗಳಿಗೆ ತಪ್ಪದೆ ಹುಳುವಿನ ಔಷಧಿ ತಿನ್ನಿಸಿ ಎಂದ ಅವರು, ಶೇ. 50 ಸಬ್ಸಿಡಿ ದರದಲ್ಲಿ ಔಷಧಿ ನೀಡಲಾಗುತ್ತದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ತಿಮ್ಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡೇರಿ ಕಾರ್ಯದರ್ಶಿ ಬಿ.ಪಿ. ಲೋಕೇಶ್ ಲೆಕ್ಕಪತ್ರಗಳನ್ನು ಸದಸ್ಯರಿಗೆ ತಿಳಿಸಿದರು. ಸಭೆಯಲ್ಲಿ ಮೈಮುಲ್ನ ಮಾರ್ಗ ವಿಸ್ತರಣಾಧಿಕಾರಿ ಎಂ. ಚಂದ್ರಶೇಖರ್, ನಿರ್ದೇಶಕರಾದ ಚೆಲುವಾಜು, ಬೋರಪ್ಪನಾಯಕ, ಶಿವಕುಮಾರ್, ಬಾಲಕೃಷ್ಣ, ಜಯರಾಮ, ಶಿವಮ್ಮ, ಶ್ರೀಮತಿ ನಂದಮ್ಮ, ಸದಸ್ಯರಾದ ಬಿ.ಪಿ. ಲೋಲರಾಜ್, ರಾಮನಾಯಕ ಇದ್ದರು.