ಸ್ವಚ್ಛತೆಗೆ ಮೂಡಲಕೊಪ್ಪಲು ಗ್ರಾಮಸ್ಥರ ಆಗ್ರಹ
ಕ.ಪ್ರ.ವಾರ್ತೆ , ಹುಣಸೂರು , ಜು. 31
ತಾಲೂಕಿನ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಮೂಡಲಕೊಪ್ಪಲು ಗ್ರಾಮದ ರಸ್ತೆಗಳು ತೀರಾ ಹದಗೆಟ್ಟಿದ್ದು, ಇಲ್ಲಿ ಚರಂಡಿ ನಿರ್ಮಾಣ ಮಾಡದ ಕಾರಣ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಕೆಸರಿನ ವಾತಾವರಣ ನಿರ್ಮಾಣಗೊಂಡಿದೆ.
ಕೊಳಚೆ ನೀರು ಹರಿಯುತ್ತಿರುವುದರಿಂದ ಇಲ್ಲಿನ ವಾತಾವರಣವೇ ದುರ್ವಾಸನೆ ಬೀರುತ್ತಿದೆ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಇಲ್ಲಿ ಸೊಳ್ಳೆಗಳ ಉಪಟಳ ಹೆಚ್ಚಾಗಿದ್ದು,
ಇಲ್ಲಿನ ಗ್ರಾಮಸ್ಥರೆಲ್ಲರೂ ಸಾಂಕ್ರಾಮಿಕ ರೋಗದ ಹರಡುವಿಕೆ ಬಗ್ಗೆ ದಿಗಿಲಾಗಿದ್ದಾರೆ. ಗ್ರಾಮದ ಮುಖ್ಯದ್ವಾರದಲ್ಲೇ ಈ ರೀತಿಯ ಪರಿಸ್ಥಿತಿಯಿದ್ದು, ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಪಂಚಾಯಿತಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ರಾಜ್ಯದ ಎಲ್ಲೆಡೆ ಡೆಂಘೀ ಹರಡುತ್ತಿದ್ದು, ಇಲ್ಲಿ ಸೊಳ್ಳೆಗಳು ಹೆಚ್ಚಾಗಿರುವುದರಿಂದ ಇಲ್ಲಿನ ಜನರಲ್ಲೂ ಇದೀಗ ಆತಂಕಕ್ಕೀಡಾಗಿದ್ದಾರೆ.
ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅನೈರ್ಮಲ್ಯ ತೊಡೆದು ಹಾಕಲು ಮುಂದಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.