ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಂದಿನಿ ಬಲು ತುಟ್ಟಿ ಕಣ್ರಿ...

Rashmi Kasaragodu
Updated On : 2 Jun 2013, 12:11 pm

ಮಾ. ವೆಂಕಟೇಶ್
ಕ.ಪ್ರ.ವಾರ್ತೆ    ಮೈಸೂರು    ಜೂ. 1
ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಿರುವ ರಾಜ್ಯ ಸರ್ಕಾರದ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ಹಾಲು ದಿನಾಚರಣೆಯಂದು ಬೆಳಗ್ಗೆ ಹಾಲು ಖರೀದಿಸಲು ಹೋದವರಿಗೆ ಹಾಲಿನ ದರ ಹೆಚ್ಚಳ ಕಂಡು ಹೌಹಾರಿದ ಘಟನೆಗಳು ಹಾಲು ಮಾರಾಟ ಕೇಂದ್ರದ ಬಳಿ ಶನಿವಾರ ಕಂಡುಬಂತು. 250 ಎಂಎಲ್ ಹಾಲಿನ ದರ 7.50 ಇದ್ದದ್ದು 8 ಕ್ಕೆ ಹಾಗೂ 500 ಎಂಎಲ್ ಹಾಲಿನ ದರ 13.50 ಇದ್ದದ್ದು 14ಕ್ಕೆ ಏರಿಕೆಯಾಗಿರುವುದು ಜನರ ಅಸಮಾಧಾನಕ್ಕೆ ಕಾರಣ.
ವಾಗ್ವಾದ: ಹಾಲಿನ ದರ ಹೆಚ್ಚಳ ಮಾಡುವುದಾಗಿ ಸರ್ಕಾರ ಈ ವಿಷಯವನ್ನು ಪ್ರಕಟಿಸಿತ್ತು. ಆದರೆ, ಈ ಸುದ್ದಿ ಜನಸಾಮಾನ್ಯರಿಗೆ ತಿಳಿಯದ ಕಾರಣ, ಹಾಲು ಮಾರಾಟಗಾರರ ಬಳಿ ವಾಗ್ವಾದಕ್ಕೆ ಮುಂದಾಗಿದ್ದರು.
ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಸಲಹೆ ಅಥವಾ ಯಾವುದೇ ಒತ್ತಡ ಇಲ್ಲದೆ ಏಕಾಏಕಿ ಹಾಲಿನ ದರ ಏರಿಸಿರುವ ಸರ್ಕಾರದ ಕ್ರಮವನ್ನು ನಾಗರಿಕರು ಅದರಲ್ಲೂ ವಿಶೇಷವಾಗಿ ಮಹಿಳಾ ಸಮುದಾಯ ತೀವ್ರವಾಗಿ ಖಂಡಿಸಿದೆ. ಈಗಾಗಲೇ ದಿನನಿತ್ಯದ ವಸ್ತುಗಳ ಬೆಲೆ ಹಾಗೂ ತರಕಾರಿ ಬೆಲೆ ಗಗನಕ್ಕೇರಿ ಕುಟುಂಬ ನಿರ್ವಹಣೆಗೆ ಸಂಕಷ್ಟ ಅನುಭವಿಸುತ್ತಿರುವ ಬೆನ್ನಲ್ಲೆ ಹಾಲಿನ ದರ ಹೆಚ್ಚಳ ಮಾಡಿರುವುದು ಮತ್ತೊಂದು ಹೊರೆಯಾಗಿದೆ ಎಂದಿದ್ದಾರೆ.  
ಚಿಲ್ಲರೆ ನೆಪ: ಹಾಲಿನ ದರ ಹೆಚ್ಚಳ ಮಾಡುವಾಗ ಪಶು ಸಾಕಾಣಿಕೆ ವೆಚ್ಚದ ಹೊರೆ, ಹಾಲಿನ ಉತ್ಪಾದನೆಯ ಖರ್ಚಿನ ಹೊರೆ, ಹೈನುಗಾರಿಕೆಗೆ ನೀಡಬೇಕಾದ ಬೆಂಬಲ ಬೆಲೆ ಈ ಮುಂತಾದ ಕಾರಣ ಮುಂದಿಟ್ಟುಕೊಂಡು ದರ ಹೆಚ್ಚಿಸುವುದು ವಾಡಿಕೆ. ಆದರೆ, ಕಾಂಗ್ರೆಸ್ ಸರ್ಕಾರ ಈ ಯಾವುದೇ ಸಕಾರಣವಿಲ್ಲದೆ ಕೇವಲ ಚಿಲ್ಲರೆ ಹಣದ ಸಮಸ್ಯೆ ಮುಂದಿಟ್ಟುಕೊಂಡು 50 ಪೈಸೆ ಹೆಚ್ಚಿಸಲಾಗಿದೆ ಎಂಬುದು ನಿಜಕ್ಕೂ ಸರ್ಕಾರದ ಚಿಲ್ಲರೆ ನೆಪ ಎಂಬುದು ಪ್ರಜ್ಞಾವಂತರ ಟೀಕೆ.
ಚಿಲ್ಲರೆ ಸಮಸ್ಯೆ ತಪ್ಪಿಸಿ ಗ್ರಾಹಕರ ಅನುಕೂಲಕ್ಕಾಗಿ ದರ ಹೆಚ್ಚಿಸಲಾಗಿದೆ ಎಂದು ಜನಪರ ಮಾತನಾಡುವ ಸರ್ಕಾರ, ನಾಗರಿಕರ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಕೇವಲ 20 ಎಂಎಲ್ ಹೆಚ್ಚಿಸುವ ಬದಲು, 7.50 ರ ಬದಲು 7 ಹಾಗೂ 13.50 ಬದಲು 13ಕ್ಕೆ ಹಾಲನ್ನು ನೀಡಬಹುದಾಗಿತ್ತು ಎನ್ನುತಾರೆ ಹೆಬ್ಬಾಳಿನ ಗಿರಿಜಮ್ಮ. 1 ಲೀಟರ್ ಹಾಲು ಖರೀದಿಸುವ ಶ್ರೀಮಂತರಿಗೆ ಹೊರೆ ಹಾಕದೆ ಬಡವರ ಬೇಬಿಗೆ ಮಾತ್ರ ಕೈ ಹಾಕಿರುವುದು ಸರ್ಕಾರದ ಬಡವರ ವಿರೋಧಿತನ ತೋರಿಸುತ್ತದೆ ಎಂದು ಹಲವರು ಕಿಡಿಕಾರಿದ್ದಾರೆ.

ಬಡವರು ಹಾಗೂ ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟ ಇಲ್ಲದೆ ಹೋದರು ಕಾಫಿ, ಟೀ ಕುಡಿದು ಜೀವನ ನಡೆಸುವುದಿದೆ. ಈಗಾಗಲೇ ಒಂದು ಚೋಟಾ ಟೀ, ಕಾಫಿಗೆ ಗಾಡಿ ಹೋಟೆಲ್ ಹಾಗೂ ಸಣ್ಣ ಹೋಟೆಲ್ಗಳಲ್ಲಿ 5 ರಿಂದ 7 ವರೆಗೆ ದರವಿದೆ. ಈಗ ಹಾಲು ದರ ಹೆಚ್ಚಾಗಿರುವುದರಿಂದ ಚಹಾ ದರ ಮತ್ತೆ ಏರಿಕೆಯಾದರೆ ನಮ್ಮಂಥವರ ಗತಿಯೇನು?
- ಚಿಕ್ಕಣ್ಣ, ಕೂಲಿಕಾರ್ಮಿಕ, ಸಂತೇಪೇಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement