ನೇಗಿಲಯೋಗಿ ಮರುಳೇಶ್ವರ ಸೇವಾ ಭವನ ಸಮರ್ಪಣೆ
ಕ.ಪ್ರ.ವಾರ್ತೆ ಮೈಸೂರು ಜೂ. 1
ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರೈತರ ಕಲ್ಯಾಣಕ್ಕಾಗಿ ಸ್ಥಾಪಿಸಿರುವ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದ ಉದ್ಘಾಟನೆಯು ಶುಕ್ರವಾರ ನಡೆಯಿತು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಮರುಳೇಶ್ವರ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮರುಳೇಶ್ವರ ಟ್ರಸ್ಟ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವು ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮರುಳೇಶ್ವರ ಟ್ರಸ್ಟ್ ಅಧ್ಯಕ್ಷ ಡಾ. ಮಹದೇವಯ್ಯ, ದಾನಿಗಳ ಉದಾರ ನೆರವಿನಿಂದ ನಿರ್ಮಿಸಲಾಗಿರುವ ಈ ಭವನದ ಸೇವಾ ಕಾರ್ಯವನ್ನು ಸದುಪಯೋಗಪಡಿಸಿಕೊಂಡು ಸಮಾಜ ಹಾಗೂ ಸಮುದಾಯದ ಅಭಿವೃದ್ಧಿಗೆ ಮುಂದಾಗುವಂತೆ ಸಲಹೆ ನೀಡಿದರು.
ನೇಗಿಲಯೋಗಿ ಮರುಳೇಶ್ವರ ಸೇವಾ ಭವನವನ್ನು ದಾನಿಗಳೂ ಆದ ನಿರ್ಮಿತಿ ಕೇಂದ್ರದ ನಿರ್ದೇಶಕ ಎಂ.ಟಿ ಮಂಜುನಾಥ್, ಕಚೇರಿಯನ್ನು ಅಪೋಲೋ ಆಸ್ಪತ್ರೆಯ ಡಾ. ಬಾಲಕೃಷ್ಣೇಗೌಡ ಹಾಗೂ ಉಚಿತ ವಸತಿ ನಿಲಯವನ್ನು ಉದ್ಯಮಿ ಹರೀಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸೋಮನಾಥ ಸ್ವಾಮೀಜಿ ಸನ್ಮಾನಿಸಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಾರ್ಯದರ್ಶಿ ಪ್ರೊ. ಕೆ. ಆರ್. ರಂಗಯ್ಯ ಇದ್ದರು. ಅಧ್ಯಕ್ಷ ಡಾ.ಎಲ್. ದೇವೇಗೌಡ ಸ್ವಾಗತಿಸಿದರು. ನೇಗಿಲಯೋಗಿ ಟ್ರಸ್ಟ್ ಸಂಚಾಲಕ ಡಿ. ರವಿಕುಮಾರ್ ಪ್ರಾಸ್ತಾವಿಕ ಮಾತುಗಳಾಡಿದರು. ಕಾರ್ಯದರ್ಶಿ ಎಂ.ಪಿ. ಸುರೇಶ್ ವಂದಿಸಿದರು.