ಮಾಂಡೋವಿ ಮೋಟಾರ್ಸ್ಗೆ ದಂಡ
ಮೈಸೂರು: ತಯಾರಿಕಾ ನ್ಯೂನತೆಯುಳ್ಳ ವಾಹನವನ್ನು ಗ್ರಾಹಕರೊಬ್ಬರಿಗೆ ಮಾರಾಟ ಮಾಡಿದ್ದ ಮಾಂಡೋವಿ ಮೋಟಾರ್ಸ್ಗೆ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಯು 40 ಸಾವಿರ ದಂಡ ವಿಧಿಸಿದೆ. ಕುವೆಂಪುನಗರ ಅನಿಕೇತನ ರಸ್ತೆ ಸಿದ್ದಯ್ಯ ಎಂಬವರ ಪುತ್ರ ಎಂ.ಎಸ್. ಸುನಿಲ್ಕುಮಾರ್ ಅವರು 2011ರ ಮಾ. 16ರಂದು ಮಾರುತಿ ಒಮ್ನಿ ವಾಹನ ಖರೀದಿಸಿದ್ದರು. ಎಂ.ಕಾಂ ಪದವೀಧರರಾದ ಸುನಿಲ್ಕುಮಾರ್ ಅವರು ನಿರುದ್ಯೋಗಿಯಾಗಿದ್ದು, ಜೀವನೋಪಯಕ್ಕಾಗಿ ಈ ವಾಹನವನ್ನು ಟ್ಯಾಕ್ಸಿ ಉದ್ದೇಶಕ್ಕಾಗಿ ಸಂಪೂರ್ಣ ಹಣ ಪಾವತಿಸಿ ಖರೀದಿಸಿದ್ದರು. ಆದರೆ, ಈ ವಾಹನ ಚಾಲನೆ ವೇಳೆ ಮಳೆ ನೀರು ಕಾರಿನೊಳಗೆ ಸೋರುತ್ತಿತ್ತು. ಈ ಸಂಬಂಧ ಸುನಿಲ್ಕುಮಾರ್ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷ ಟಿ.ಎಚ್. ನಾರಾಯಣಗೌಡ, ಸದಸ್ಯರಾದ ಜೆ. ಶಿವಕುಮಾರ್, ಎಂ.ವಿ. ಭಾರತಿ ಅವರು ಮಾಂಡೋವಿ ಮೋಟಾರ್ಸ್ಗೆ 40 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಗೃಹಿಣಿಯರಿಗಾಗಿ 45 ದಿನಗಳ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರ ಆರಂಭಿಸಲಿದ್ದು, ಆಸಕ್ತರು ಜೂ. 7 ರೊಳಗೆ ರಾಜ್ಯ ಮುಕ್ತ ವಿವಿ ಆವರಣದಲ್ಲಿರುವ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 4 ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕುಲಸಚಿವ ಡಾ.ಬಿ.ಎಸ್. ವಿಶ್ವನಾಥ್ ತಿಳಿಸಿದ್ದಾರೆ. ದೂ. 0821- 2515944 ಸಂಪರ್ಕಿಸಬಹುದು.
ಜೀವನ ಕಲೆ ಶಿಬಿರ
ಮೈಸೂರು: ಸಿದ್ದಾರ್ಥನಗರದ ದಿ ಆರ್ಟ್ ಆಫ್ ಲೀವಿಂಗ್ನಲ್ಲಿ ಜೂ. 4ರಿಂದ 9 ರವರೆಗೆ ಜೀವನ ಕಲೆ ಶಿಬಿರ ಭಾಗ- 1ರ ಕಾರ್ಯಕ್ರಮ ಆಯೋಜಿಸಿದ್ದು, ಉಚಿತ ಪರಿಚಯ ಭಾಷಣವು ಜೂ. 2ರ ಸಂಜೆ 6.30ಕ್ಕೆ ನಡೆಯಲಿದೆ. ಮೊ. 9845520617 ಸಂಪರ್ಕಿಸಬಹುದು.