ಹುಲಿ ಮರಣೋತ್ತರ ಪರೀಕ್ಷೆ
ಕ.ಪ್ರ.ವಾರ್ತೆ ಹುಣಸೂರು ಜೂ. 1
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಲಕ್ಷ್ಮಣತೀರ್ಥ ನದಿಯ ದಂಡೆಯಲ್ಲಿ ಗುರುವಾರ ಪತ್ತೆಯಾದ ಹುಲಿಯ ಕಳೆಬರವನ್ನು ಶುಕ್ರವಾರ ಸಂಜೆ ಅರಣ್ಯ ಇಲಾಖೆಯ ಪಶು ವೈದ್ಯ ಡಾ. ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದರು.
ಕಳೆದ ಒಂದು ತಿಂಗಳಿನಿಂದ ಕಾಡಂಚಿನ ಗ್ರಾಮಗಳ ಜನತೆಯ ನಿದ್ದೆಗೆಡಿಸಿದ ಹುಲಿಯು, ಗುರುವಾರ ಸಂಜೆ ಮತ್ತಿಗೊಡು ವಲಯ ಪಾರದಕಡದ ಲಕ್ಷ್ಮಣತೀರ್ಥ ನದಿಯ ದಂಡೆಯಲ್ಲಿ ಮೃತಪಟ್ಟಿತು.
ಹುಲಿಯ ಕಳೆಬರದಲ್ಲಿ ಬೇರೆ ಪ್ರಾಣಿಯೊಂದಿಗೆ ಕಾದಾಟ ನಡೆಸಿ ದೇಹದ ಮೇಲೆ ಗಾಯಗಳಾಗಿರುವ ಕುರುಹು ಕಂಡು ಬಂದಿದ್ದು, ಜೊತೆಗೆ ಎಡಭಾಗದ ಮುಂಗಾಲು ಮಂಡಿ ಭಾಗ ಮುರಿತಗೊಳಗಾಗಿದ್ದು, ಬೇಟೆಯಾಡಲು ಸಾಧ್ಯವಾಗದೆ ಹಸಿವಿನಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪ್ರಯೋಗಾಲಯದಿಂದ ವರದಿ ಬಂದ ನಂತರ ಸಾವಿನ ಕಾರಣ ತಿಳಿದುಬರುವುದು ಎಂದು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಬಿ.ಜೆ. ಹೊಸಮಠ್ ಹೇಳಿದರು. ಸ್ಥಳಕ್ಕೆ ಎಸಿಎಫ್ ಬೆಳ್ಳಿಯಪ್ಪ, ಆರ್ಎಫ್ಒ ದೇವರಾಜ್ ಭೇಟಿ ನೀಡಿದ್ದರು.