ಆರ್ಟಿಇ ಜಾರಿಗೊಳಿಸದಿದ್ದರೆ ಪ್ರತಿಭಟನೆ'
ಕ.ಪ್ರ.ವಾರ್ತೆ ಮೈಸೂರು ಜೂ. 2
ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೊಳಿಸದ ಶಾಲೆಗಳ ವಿರುದ್ಧ ಪ್ರತಿಭಟಿಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಳಗ) ಅಧ್ಯಕ್ಷ ಎಂ. ಶಿವಪ್ಪ ಎಚ್ಚರಿಸಿದರು.
ನಗರದ ಕೌಟಿಲ್ಯ ವಿದ್ಯಾಲಯ, ಡಿಪಾಲ್ ಶಾಲೆ ಸೇರಿದಂತೆ ಹಲವು ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೊಳಿಸಿಲ್ಲ. ಈ ಬಗ್ಗೆ ಡಿಡಿಪಿಐ, ಬಿಇಒಗಳು ಸಹ ಕ್ರಮ ಕೈಗೊಳ್ಳದೆ ಶಾಲೆಯ ನೌಕರರಂತೆ ವರ್ತಿಸುತ್ತಿದ್ದಾರೆ. ಪರಿಶಿಷ್ಟರಿಗೆ ಮೀಸಲಾತಿ ಸಹ ನೀಡುತ್ತಿಲ್ಲ. ಅಲ್ಪಸಂಖ್ಯಾತ ಶಾಲೆ ಹೆಸರಿನಲ್ಲಿ ಕಾಯ್ದೆ ಜಾರಿಗೊಳಿಸದೆ ವಂಚಿಸುತ್ತಿದ್ದಾರೆ. ಈ ಸಂಬಂಧ ಕೂಡಲೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಎಲ್ಲಾ ಶಾಲೆಯಲ್ಲಿಯೂ ಆರ್ಟಿಇ ಕಾಯ್ದೆ ಜಾರಿಗೊಳಿಸದಿದ್ದರೆ ಹೋರಾಟ ನಡೆಸುವುದಾಗಿ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಸಿ ಬಳಿಯುವ ಎಚ್ಚರಿಕೆ: ವಿಧಾನಸಭೆಯಲ್ಲಿ ಮರಾಠಿ ಮತ್ತು ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರು ಕೂಡಲೆ ಕ್ಷಮೆಯಾಚಿಸಬೇಕು. ಅಲ್ಲದೆ ಮತ್ತೊಮ್ಮೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು. ತಪ್ಪಿದರೆ ಮೈಸೂರಿಗೆ ಈ ಶಾಸಕರು ಆಗಮಿಸಿದಾಗ ಮುಖಕ್ಕೆ ಮಸಿ ಬಳಿಯುವುದಾಗಿ ಅವರು ಎಚ್ಚರಿಸಿದರು. ಮುಖಂಡರಾದ ಹೊನ್ನೇಗೌಡ, ರವಿ ಇದ್ದರು.