ನೀರು, ಸೌಲಭ್ಯಕ್ಕಾಗಿ ನಿವಾಸಿಗಳ ಪ್ರತಿಭಟನೆ
ಮೈಸೂರು: ತಮ್ಮ ಬಡಾವಣೆಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ವಿದ್ಯಾಶಂಕರನಗರ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ವಿದ್ಯಾಶಂಕರನಗರ ಗೃಹ ನಿರ್ಮಾಣ ಮಂಡಳಿಯವರು ಶಕ್ತಿನಗರದ ಬಳಿ ಈ ಬಡಾವಣೆಯನ್ನು ನಿರ್ಮಿಸಿದ್ದು, ಇಲ್ಲಿ ಸರಿಯಾದ ನೀರು, ಚರಂಡಿ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಮಂಡಳಿಯ ಅಧ್ಯಕ್ಷ ಶಂಕರಪ್ಪ ಅವರು, ಬಡಾವಣೆಯನ್ನು ಎಂಡಿಎ, ಪಾಲಿಕೆ ವ್ಯಾಪ್ತಿಗೆ ಸೇರಿಸಲು ಮನವಿ ಮಾಡಿರುವುದಾಗಿ ಸ್ಪಷ್ಟಪಡಿಸಿದರು. ಬಡಾವಣೆ ನಿವಾಸಿ ವಾಮನಮೂರ್ತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ನಾಗರತ್ನ ಸಾಧನೆ
ಮೈಸೂರು: ವಿಜಯನಗರದಲ್ಲಿರುವ ಮಾನಸ ಸರೋವರ ಪುಷ್ಕರಣಿ ವಿದ್ಯಾಶ್ರಮದ ವಿದ್ಯಾರ್ಥಿನಿ ಎನ್.ಕೆ. ನಾಗರತ್ನ ಅವರು 10ನೇ ತರಗತಿ ಸಿಬಿಎಸ್ಇ ಪರೀಕ್ಷೆಯಲ್ಲಿ 10 ಸಿಜಿಪಿಎ ಅಂಕಗಳಿಗೆ 9.6 ಅಂಕ ಪಡೆದು ಸಾಧನೆ ಮಾಡಿದ್ದಾರೆ. ನಾಗರತ್ನ ಅವರು ಮೈಸೂರು ತಾಲೂಕಿನ ನಾಗನಹಳ್ಳಿ ನಿವಾಸಿ ಹಾಗೂ ಎಲ್ಐಸಿ ಏಜೆಂಟ್ ಎನ್.ಎ. ಕುಮಾರಸ್ವಾಮಿ, ಸಿ. ಸುಜಾತ ದಂಪತಿ ಪುತ್ರಿ.